
ಮಂಗಳೂರು: ಸುರತ್ಕಲ್, ಕಾಟಿಪಳ್ಳ ಮತ್ತು ಕೃಷ್ಣಾಪುರ ಪ್ರದೇಶಗಳಲ್ಲಿ ಹಣಕಾಸಿನ ಲಕ್ಕಿ ಸ್ಕೀಮ್‌ಗಳ ಹಾವಳಿ ಹೆಚ್ಚುತ್ತಿರುವ ನಡುವೆಯೇ, ಇತ್ತೀಚೆಗೆ ಆರಂಭವಾದ ಮತ್ತೊಂದು ಖಾಸಗಿ ಕಂಪೆನಿಯು ಗ್ರಾಹಕರಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ತಾವು ಕಟ್ಟಿದ ಕೋಟ್ಯಂತರ ರೂಪಾಯಿ ಹಣವನ್ನು ಹಿಂದಿರುಗಿಸಲು ಮತ್ತು ಆಕರ್ಷಕ ಆಫರ್‌ಗಳನ್ನು ಒದಗಿಸಲು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ, ಆಕ್ರೋಶಗೊಂಡ ನೂರಾರು ಗ್ರಾಹಕರು ಗುರುವಾರ ಕೃಷ್ಣಾಪುರದಲ್ಲಿರುವ ಕಂಪೆನಿ ಕಚೇರಿಗೆ ಮುತ್ತಿಗೆ ಹಾಕಿ ದಾಂಧಲೆ ನಡೆಸಿರುವ ಗಂಭೀರ ಘಟನೆ ನಡೆದಿದೆ.
ಈ ಭಾಗದಲ್ಲಿ ಈಗಾಗಲೇ ಕೆಲವು ಲಕ್ಕಿ ಸ್ಕೀಮ್‌ಗಳು ಗ್ರಾಹಕರಿಗೆ ಕೋಟಿಗಟ್ಟಲೆ ಹಣ ಕಳೆದು ಪರಾರಿಯಾಗಿವೆ. ಇದೇ ಸರಣಿಗೆ ಹೊಸ ಸೇರ್ಪಡೆಯಾಗಿರುವ ಈ ಕಂಪೆನಿಯು, ಗ್ರಾಹಕರಿಂದ ಪ್ರತೀ ತಿಂಗಳು ಸಾವಿರಾರು ರೂಪಾಯಿಗಳ ಕಂತುಗಳನ್ನು ನಿಯಮಿತವಾಗಿ ಸಂಗ್ರಹಿಸಿದೆ. ಆದರೆ, ನಿಗದಿತ ಅವಧಿ ಮುಗಿದ ನಂತರವೂ ಭರವಸೆ ನೀಡಿದಂತೆ ಆಫರ್‌ಗಳನ್ನು ನೀಡದಿರುವುದು ಹಾಗೂ ಹಣವನ್ನು ಹಿಂತಿರುಗಿಸಲು ಸತತ ವಿಳಂಬ ಮಾಡುತ್ತಿರುವುದು ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ.
ಕಂಪೆನಿಯ ಮಾಲಕರು ಈ ಹಿಂದೆ, ಹಣವನ್ನು ಶೀಘ್ರದಲ್ಲಿಯೇ ಹಿಂದಿರುಗಿಸಲಾಗುವುದು ಎಂದು ಭರವಸೆ ನೀಡಿದ್ದರೂ, ಇಲ್ಲಿಯವರೆಗೆ ಗ್ರಾಹಕರ ಖಾತೆಗೆ ಒಂದು ರೂಪಾಯಿಯೂ ಜಮೆಯಾಗಿಲ್ಲ ಎನ್ನಲಾಗಿದೆ. ಇದರಿಂದಾಗಿ, ತಾವು ಕಷ್ಟಪಟ್ಟು ದುಡಿದ ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡ ಆತಂಕದಲ್ಲಿರುವ ಗ್ರಾಹಕರು ಒಟ್ಟಾಗಿ ಸೇರಿ ಕಂಪೆನಿ ಕಚೇರಿಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಉದ್ವಿಗ್ನಗೊಂಡಾಗ, ಸ್ಥಳಕ್ಕೆ ಆಗಮಿಸಿದ ಸುರತ್ಕಲ್ ಪೊಲೀಸರು ಮಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಹಣಕಾಸು ವಂಚನೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



































