
ಹೈದರಾಬಾದ್: ಖ್ಯಾತ ತೆಲುಗು ನಟ ಹಾಗೂ ಮಾಜಿ ಶಾಸಕ ಕೋಟ ಶ್ರೀನಿವಾಸ ರಾವ್ (83) ಇಂದು (ಜುಲೈ 13, ಭಾನುವಾರ) ಹೈದರಾಬಾದ್‌ನಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಅವರ ನಿಧನಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ X ಖಾತೆಯಲ್ಲಿ ಹಂಚಿಕೊಂಡ ಸಂದೇಶದಲ್ಲಿ, “ಚಲನಚಿತ್ರ ಪ್ರೇಮಿಗಳನ್ನು ತಮ್ಮ ವೈವಿಧ್ಯಮಯ ಪಾತ್ರಗಳ ಮೂಲಕ ರಂಜಿಸಿದ ಪ್ರಸಿದ್ಧ ನಟ ಕೋಟ ಶ್ರೀನಿವಾಸ ರಾವ್ ಅವರ ನಿಧನ ಸುದ್ದಿ ಅತ್ಯಂತ ದುಃಖಕರವಾಗಿದೆ. ಚಲನಚಿತ್ರ ಮತ್ತು ರಂಗಭೂಮಿ ಕ್ಷೇತ್ರಗಳಿಗೆ ಅವರ ಕೊಡುಗೆ ಅವಿಸ್ಮರಣೀಯವಾದುದು” ಎಂದು ಸ್ಮರಿಸಿದ್ದಾರೆ. ರಾವ್ ಅವರ ಖಳನಾಯಕ ಮತ್ತು ಪೋಷಕ ಪಾತ್ರಗಳ ನಟನೆಯನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ಅವರು ತೆಲುಗು ಜನರ ಹೃದಯದಲ್ಲಿ ಸದಾ ಅಮರರಾಗಿ ಉಳಿಯುತ್ತಾರೆ ಎಂದು ಹೇಳಿದರು. ತೆಲುಗು ಚಿತ್ರರಂಗಕ್ಕೆ ಇದು ತುಂಬಲಾರದ ನಷ್ಟ ಎಂದು ಅಭಿಪ್ರಾಯಪಟ್ಟರು.
ಕೋಟ ಶ್ರೀನಿವಾಸ ರಾವ್ 1999ರಲ್ಲಿ ರಾಜಕೀಯ ಪ್ರವೇಶಿಸಿ ವಿಜಯವಾಡದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ರಾಜಕೀಯದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು.
ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ತಮ್ಮ ವೃತ್ತಿಜೀವನದಲ್ಲಿ ಕೋಟ ಶ್ರೀನಿವಾಸ ರಾವ್ 750ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ ಮತ್ತು ತಮಿಳು ಚಿತ್ರಗಳಲ್ಲೂ ಅವರು ಅಭಿನಯಿಸಿದ್ದಾರೆ. ಖಳನಾಯಕ, ಪೋಷಕ ಮತ್ತು ಹಾಸ್ಯ ಪಾತ್ರಗಳಲ್ಲಿ ಅವರು ಸೈ ಎನಿಸಿಕೊಂಡಿದ್ದರು. 2023ರಲ್ಲಿ ತೆರೆಕಂಡ ‘ಸುವರ್ಣ ಸುಂದರಿ’ ಅವರ ಕೊನೆಯ ಚಿತ್ರವಾಗಿತ್ತು. ಅವರ ನಿಧನದಿಂದ ಇಡೀ ಚಿತ್ರೋದ್ಯಮ ಶೋಕ ಸಾಗರದಲ್ಲಿ ಮುಳುಗಿದೆ. ಭಾರತ ಸರ್ಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.