
ಕೋಟ: ಕರಾವಳಿಯಲ್ಲಿಯೇ ಪ್ರಥಮ ಶಾಶ್ವತ ಯುದ್ಧ ವಿಮಾನ ಪ್ರದರ್ಶನ ತಾಣವು ಉಡುಪಿ ಜಿಲ್ಲೆಯ ಕೋಟದಲ್ಲಿ ರೂಪುಗೊಳ್ಳುತ್ತಿದೆ. ಕೋಟದ ಕಾರಂತ ಕಲಾಭವನದಲ್ಲಿ ರಷ್ಯಾದ ಪ್ರಸಿದ್ಧ ಸೂಪರ್‌ಸಾನಿಕ್ ಶ್ರೇಣಿಯ ಯುದ್ಧ ವಿಮಾನವಾದ ಮಿಗ್-21 ಶಾಶ್ವತ ಪ್ರದರ್ಶನ ಕಾಣಲಿದೆ. ದೆಹಲಿಯಿಂದ ವಿಮಾನ ಈಗಾಗಲೇ ಕೋಟಕ್ಕೆ ತಲುಪಿದ್ದು, ತಾಂತ್ರಿಕ ತಂಡವು ಜೋಡಣೆ ಕಾರ್ಯದಲ್ಲಿ ತೊಡಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಇದು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವ ಸಾಧ್ಯತೆ ಇದೆ.
ಪ್ರಸ್ತುತ ಕರ್ನಾಟಕದಲ್ಲಿ ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಮಾತ್ರ ಯುದ್ಧ ವಿಮಾನ ಪ್ರದರ್ಶನಕ್ಕೆ ಅವಕಾಶವಿದೆ. ಕೋಟದಲ್ಲಿ ಈ ವಿಮಾನ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲು ಹತ್ತು-ಹನ್ನೆರಡು ವರ್ಷಗಳಿಂದ ಪ್ರಯತ್ನ ನಡೆದಿತ್ತು. ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್ ಅವರಲ್ಲಿ ಕಾರಂತ ಕಲಾಭವನದ ವಿಶೇಷತೆ ತಿಳಿಸಿ ಕೋರಿದ ಕಾರಣ, ಇದೀಗ ರಕ್ಷಣಾ ಇಲಾಖೆ ಒಪ್ಪಿಗೆ ನೀಡಿದೆ.
ಮಿಗ್-21 ವಿಮಾನದ ವಿಶೇಷತೆ
ಮಿಗ್-21 ಶ್ರೇಣಿಯ ಯುದ್ಧ ವಿಮಾನ ಹಲವು ವಿಶೇಷತೆಗಳಿಂದ ಕೂಡಿದೆ:
- ಇದನ್ನು ಸೋವಿಯತ್ ಒಕ್ಕೂಟವು ವಿನ್ಯಾಸಗೊಳಿಸಿದ್ದು, 1963ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿತ್ತು.
- 2025ರ ಸೆಪ್ಟೆಂಬರ್ ತನಕ 60 ವರ್ಷಗಳ ಕಾಲ ಸೇವೆ ಸಲ್ಲಿಸಿ, ಸೆ. 26 ರಂದು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು.
- ಇದು ಶಬ್ದದ ವೇಗದ ಎರಡು ಪಟ್ಟು ವೇಗದಲ್ಲಿ ಚಲಿಸುವ ಸಾಮರ್ಥಯ ಹೊಂದಿದೆ.
- ತನ್ನ ಸುದೀರ್ಘ ಸೇವಾವಧಿಯಲ್ಲಿ 1965, 1971 ಮತ್ತು ಕಾರ್ಗಿಲ್ ಯುದ್ಧ ಸೇರಿದಂತೆ ಬಹುತೇಕ ಎಲ್ಲ ಯುದ್ಧಗಳಲ್ಲೂ ಭಾಗವಹಿಸಿದೆ.
- 2019 ರಲ್ಲಿ ಬಾಲಾಕೋಟ್ ಬಳಿ ಪಾಕಿಸ್ತಾನದ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದಕ್ಕಾಗಿ ಇದು ಪ್ರಮುಖವಾಗಿ ಸುದ್ದಿಯಾಗಿತ್ತು.
- 1963 ರಿಂದ 2025 ರ ತನಕ ಭಾರತೀಯ ಸೇನೆ 1200 ಕ್ಕೂ ಹೆಚ್ಚು ಮಿಗ್ ವಿಮಾನಗಳನ್ನು ಬಳಸಿತ್ತು. ಅವುಗಳಲ್ಲಿ ಒಂದು ವಿಮಾನ ಇದೀಗ ಕೋಟದಲ್ಲಿ ಪ್ರದರ್ಶನಗೊಳ್ಳಲಿದೆ.
































