
ಕೋಲಾರ : ಜಾತಿ ಗಣತಿ ಸಮೀಕ್ಷೆಗೆ ತೆರಳಿದ ಶಿಕ್ಷಕಿಯೊಬ್ಬರು ನಾಪತ್ತೆಯಾಗಿದ್ದು, ಇದೀಗ ಕೆಜಿಎಫ್ ತಾಲೂಕಿನ ಐಪಲ್ಲಿ ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಘಟನೆ ಕೋಲಾರ ಜಿಲ್ಲೆಯಲ್ಲಿ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕೋಲಾರದ ಮಹಾಲಕ್ಷ್ಮಿ ಬಡಾವಣೆಯ ನಿವಾಸಿಯಾಗಿದ್ದ ಅಖ್ತರ್ ಬೇಗಂ ಮೃತಪಟ್ಟ ಶಿಕ್ಷಕಿ. ಇವರು ನರಸಾಪುರದಲ್ಲಿ ಜಾತಿ ಗಣತಿ ಸಮೀಕ್ಷೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸಮೀಕ್ಷಾ ಕಾರ್ಯ ಮುಗಿದ ನಂತರ ಅವರು ನಾಪತ್ತೆಯಾಗಿದ್ದರು.
ಎರಡು ದಿನಗಳಿಂದ ಅವರ ಸುಳಿವು ಸಿಗದೆ ಇದ್ದ ಕಾರಣ, ಕುಟುಂಬ ಸದಸ್ಯರು ಕೋಲಾರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಯುತ್ತಿರುವಾಗಲೇ, ಕೆಜಿಎಫ್ ಸಮೀಪದ ಐಪಲ್ಲಿ ಕೆರೆಯಲ್ಲಿ ಅವರ ಶವ ಪತ್ತೆಯಾಗಿರುವುದು ದೃಢಪಟ್ಟಿದೆ.
ಜಾತಿ ಗಣತಿ ಸಮೀಕ್ಷಾ ಕಾರ್ಯವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂಬ ತೀವ್ರ ಒತ್ತಡದಿಂದಾಗಿ ಶಿಕ್ಷಕಿ ಅಖ್ತರ್ ಬೇಗಂ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಈ ಅನಿರೀಕ್ಷಿತ ಘಟನೆ ಸಮೀಕ್ಷೆ ಕಾರ್ಯದಲ್ಲಿ ಭಾಗಿಯಾಗಿರುವ ಇತರೆ ಶಿಕ್ಷಕರು ಮತ್ತು ಸಿಬ್ಬಂದಿಗಳಲ್ಲಿ ತಮ್ಮ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮತ್ತು ಭೀತಿಯನ್ನು ಉಂಟುಮಾಡಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.