
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಯುವತಿಯರು ಮತ್ತು ಆಂಟಿಯರ ಡೇಟಿಂಗ್ ಸೇವೆ ಲಭ್ಯವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದ್ದ ಆರೋಪದ ಮೇಲೆ ಬಾಗಲಕೋಟೆ ಜಿಲ್ಲೆಯ ವ್ಯಕ್ತಿಯನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಾಗಲಕೋಟೆ ಜಿಲ್ಲೆ, ಮುಧೋಳ ತಾಲ್ಲೂಕಿನ ಬೆಳಗಲಿ ಗ್ರಾಮದ 26 ವರ್ಷದ ನಾಗಪ್ಪ ಹನುಮಂತ ಲಮಾಣಿ ಎಂದು ಗುರುತಿಸಲಾಗಿದೆ. ಈತ ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವಿಡಿಯೋವನ್ನು ಬಳಸಿ, ‘ಡೇಟಿಂಗ್‌ಗೆ ಯುವತಿಯರು, ಆಂಟಿಯರು ಸಿಗುತ್ತಾರೆ, ಸೇವೆ ಬೇಕಾದರೆ ಕರೆ ಮಾಡಿ’ ಎಂದು ಮೊಬೈಲ್ ಸಂಖ್ಯೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಈ ಪೋಸ್ಟ್‌ಗಳು ವ್ಯಾಪಕವಾಗಿ ಹರಿದಾಡಿದ್ದವು.
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇಂತಹ ಪ್ರಚೋದನಕಾರಿ ಮತ್ತು ಸುಳ್ಳು ಮಾಹಿತಿಯಿಂದ ಜಿಲ್ಲೆಯ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ ಎಂದು ಜನರು ದೂರಿದ್ದರು. ಈ ದೂರುಗಳ ಆಧಾರದ ಮೇಲೆ ಕೊಡಗು ಜಿಲ್ಲಾ ಪೊಲೀಸರು ತನಿಖೆ ಕೈಗೊಂಡಿದ್ದರು.