
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ (Kiccha Sudeep) ಅವರು ತಮ್ಮ ಜನ್ಮದಿನದ ಮುನ್ನಾದಿನ, ಅಂದರೆ ಇಂದು (ಆಗಸ್ಟ್ 30, ಶನಿವಾರ) ಒಂದು ಮಹತ್ವದ ಮತ್ತು ಸಮಾಜಮುಖಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ದಿವಂಗತ ತಾಯಿ ಸರೋಜಾ ಅವರ ಹುಟ್ಟುಹಬ್ಬದ ಅಂಗವಾಗಿ, ಸುದೀಪ್ ಅವರು ‘ಅಮ್ಮನ ಹೆಜ್ಜೆಗೆ ಹಸಿರ ಹೆಜ್ಜೆ’ ಎಂಬ ವಿಶಿಷ್ಟ ಯೋಜನೆಗೆ ಚಾಲನೆ ನೀಡಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ಸುದೀಪ್, ಅವರ ನೆನಪಿನಲ್ಲಿ ಈ ಪರಿಸರ ಸ್ನೇಹಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಸಿರು ಕ್ರಾಂತಿಯ ಮೊದಲ ಹೆಜ್ಜೆಯಾಗಿ ಅವರು ಒಂದು ತೆಂಗಿನ ಗಿಡವನ್ನು ನೆಟ್ಟರು. ಈ ಕಾರ್ಯಕ್ರಮದ ಮೂಲಕ ಪ್ರತಿ ವರ್ಷ ಗಿಡಗಳನ್ನು ನೆಡುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಪತ್ನಿ ಮತ್ತು ಇತರ ಕುಟುಂಬ ಸದಸ್ಯರು ಕೂಡ ಭಾಗಿಯಾಗಿದ್ದರು.
ಮುಂದಿನ ಸಿನಿಮಾಗಳು ಮತ್ತು ಬಿಗ್ ಬಾಸ್
ಸಿನಿಮಾಗಳ ವಿಚಾರಕ್ಕೆ ಬಂದರೆ, ಸುದೀಪ್ ಪ್ರಸ್ತುತ ‘ಮ್ಯಾಕ್ಸ್’ ಚಿತ್ರದ ನಿರ್ದೇಶಕನ ‘ಕೆ47’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಂತರ, ಅವರು ‘ಬಿಲ್ಲಾ ರಂಗ ಭಾಷಾ’ ಪ್ರಾಜೆಕ್ಟ್‌ನಲ್ಲಿ ತೊಡಗಿಕೊಳ್ಳಲಿದ್ದಾರೆ. ಇದಾದ ಬಳಿಕ ತಮಿಳು ನಿರ್ದೇಶಕರೊಬ್ಬರ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ, ಇನ್ನೇನು ಮುಂದಿನ ತಿಂಗಳಿನಿಂದ ಅವರು ಜನಪ್ರಿಯ ಟಿವಿ ರಿಯಾಲಿಟಿ ಶೋ ‘ಬಿಗ್ ಬಾಸ್’ ನಿರೂಪಕರಾಗಿ ಮತ್ತೆ ವೀಕ್ಷಕರ ಮುಂದೆ ಬರಲಿದ್ದಾರೆ.
ತಮ್ಮ ತಾಯಿಯ ಹುಟ್ಟುಹಬ್ಬದಂದು ಸುದೀಪ್‌ರಿಂದ ನಡೆದಿರುವ ಈ ಕಾರ್ಯ, ಅಭಿಮಾನಿಗಳು ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.