
ಕಾರ್ಕಳ: ಜನಪ್ರತಿನಿಧಿಯೇ ರಕ್ಷಕನಾಗುವ ಬದಲು ಭಕ್ಷಕನಾದರೇ? ಇಂತಹದೊಂದು ಗಂಭೀರ ಪ್ರಶ್ನೆ ಈಗ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದಲ್ಲಿ ಕೇಳಿಬರುತ್ತಿದೆ. ಕೆರ್ವಾಶೆ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಸರ್ಕಾರಿ ಅರಣ್ಯಕ್ಕೆ ಲಗ್ಗೆ ಇಟ್ಟು ಮರಗಳನ್ನು ಕಳ್ಳಸಾಗಾಟ ಮಾಡಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಘಟನೆಯ ವಿವರ:
ಕೆರ್ವಾಶೆ ಪಂಚಾಯತ್ ಸದಸ್ಯರಾಗಿರುವ ಧರ್ಮರಾಜ ಜೈನ್ ಎಂಬವರು ತಮ್ಮ ಸ್ವಂತ ಲಾಭಕ್ಕಾಗಿ ಸರ್ಕಾರಿ ಅರಣ್ಯದ ಮರಗಳನ್ನು ಕಡಿದು ಸಾಗಾಟ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕೆರ್ವಾಶೆಯ ಹುರಿಕುಮೇರಿ ಎಂಬಲ್ಲಿರುವ ಅಂಗು ಪೂಜಾರಿ ಎಂಬುವವರ ಕುಮ್ಕಿ ಜಮೀನಿನ ಪಕ್ಕದಲ್ಲಿರುವ ಸರ್ಕಾರಿ ಭೂಮಿಯಲ್ಲಿ ಬೆಳೆದಿದ್ದ ಸಾವಿರಾರು ರೂಪಾಯಿ ಮೌಲ್ಯದ ಮರಗಳನ್ನು ಅಕ್ರಮವಾಗಿ ನೆಲಸಮ ಮಾಡಲಾಗಿದೆ ಎನ್ನಲಾಗಿದೆ.
ಅಧಿಕಾರಿಗಳ ಮೇಲೆ ಸಂಶಯದ ಕಣ್ಣು:
ವಿಶೇಷವೆಂದರೆ, ಈ ದಂಧೆಯ ಹಿಂದೆ ಅರಣ್ಯ ಇಲಾಖೆಯ ಕೆಳಮಟ್ಟದ ಸಿಬ್ಬಂದಿಗಳ ಕೈವಾಡವೂ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳೀಯ ಅರಣ್ಯ ರಕ್ಷಕ ಚಂದ್ರಕಾಂತ್ ಅವರು ಈ ವಿಚಾರವಾಗಿ ಪ್ರತಿಕ್ರಿಯಿಸಿ, “ಕೇವಲ ರಸ್ತೆಗೆ ತಾಗಿದ್ದ ಮರದ ಗೆಲ್ಲುಗಳನ್ನು ಮಾತ್ರ ಕಡಿಯಲಾಗಿದೆ” ಎಂದು ಹೇಳುವ ಮೂಲಕ ಪ್ರಕರಣದ ತೀವ್ರತೆಯನ್ನು ತಗ್ಗಿಸಲು ಮುಂದಾಗಿದ್ದಾರೆ. ಆದರೆ, ಸ್ಥಳೀಯರ ಪ್ರಕಾರ ಇದು ವ್ಯವಸ್ಥಿತವಾಗಿ ನಡೆದ ಮರಗಳ್ಳತನವಾಗಿದ್ದು, ಅಧಿಕಾರಿಗಳು ಸದಸ್ಯನನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ವಲಯ ಅರಣ್ಯಾಧಿಕಾರಿಗಳ ಭರವಸೆ:
ಪ್ರಕರಣದ ಕುರಿತು ಸ್ಪಷ್ಟನೆ ನೀಡಿರುವ ಕಾರ್ಕಳ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಅವರು, “ಅರಣ್ಯ ವ್ಯಾಪ್ತಿಯಲ್ಲಿ ಯಾವುದೇ ಮರ ಅಥವಾ ರೆಂಬೆ-ಗೆಲ್ಲುಗಳನ್ನು ಅನುಮತಿ ಇಲ್ಲದೆ ಕಡಿಯುವುದು ಕಾನೂನುಬಾಹಿರ. ಈ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗುವುದು,” ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆಯೂ ಧರ್ಮರಾಜ ಜೈನ್ ಮೇಲೆ ಇಂತಹ ಅಕ್ರಮಗಳ ಆರೋಪ ಕೇಳಿಬಂದಿದ್ದು, ಈ ಬಾರಿಯಾದರೂ ಅರಣ್ಯ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆಯೇ ಎಂದು ಕಾದುನೋಡಬೇಕಿದೆ.



































