
ಕೊಲ್ಲಂ: ಕೇರಳದ ಕ್ರೀಡಾ ವಲಯವನ್ನು ಬೆಚ್ಚಿಬೀಳಿಸುವ ಘಟನೆಯೊಂದು ಕೊಲ್ಲಂನಲ್ಲಿ ನಡೆದಿದೆ. ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ಹಾಸ್ಟೆಲ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿನಿಯರು ಗುರುವಾರ (ಜನವರಿ 15) ಮುಂಜಾನೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕ್ರೀಡಾ ಹಾಸ್ಟೆಲ್‌ನ ಒಂದೇ ಕೊಠಡಿಯಲ್ಲಿ ಇಬ್ಬರು ಯುವತಿಯರು ಶವವಾಗಿ ಪತ್ತೆಯಾಗಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ.
ಮೃತರನ್ನು 17 ವರ್ಷದ ಅಥ್ಲೆಟಿಕ್ಸ್ ಕ್ರೀಡಾಪಟು ಮತ್ತು 15 ವರ್ಷದ ಕಬಡ್ಡಿ ಆಟಗಾರ್ತಿ ಎಂದು ಗುರುತಿಸಲಾಗಿದೆ. ಇವರು ಕ್ರಮವಾಗಿ 12 ಮತ್ತು 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಪ್ರತಿದಿನದಂತೆ ಬೆಳಗಿನ ಜಾವದ ತರಬೇತಿಗೆ ಇವರು ಹಾಜರಾಗದಿದ್ದಾಗ ಅನುಮಾನಗೊಂಡ ಸಹಪಾಠಿಗಳು ಕೋಣೆಯ ಬಳಿ ಹೋಗಿ ನೋಡಿದ್ದಾರೆ. ಎಷ್ಟು ಬಾರಿ ಬಾಗಿಲು ತಟ್ಟಿದರೂ ಸ್ಪಂದನೆ ಸಿಗದಿದ್ದಾಗ, ಅಧಿಕಾರಿಗಳು ಬಾಗಿಲು ಒಡೆದು ಒಳಪ್ರವೇಶಿಸಿದಾಗ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, 15 ವರ್ಷದ ಬಾಲಕಿ ತನ್ನ ಕೊಠಡಿಯನ್ನು ಬಿಟ್ಟು ಬುಧವಾರ ರಾತ್ರಿ ಗೆಳತಿಯ ಕೋಣೆಯಲ್ಲಿ ಉಳಿದುಕೊಂಡಿದ್ದಳು. ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ. ಈ ಇಬ್ಬರು ಉದಯೋನ್ಮುಖ ಕ್ರೀಡಾಪಟುಗಳು ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದು ಸದ್ಯಕ್ಕೆ ನಿಗೂಢವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.



































