
ತಿರುವನಂತಪುರಂ: ಕೇರಳ ರಾಜ್ಯದ ಅಧಿಕೃತ ಹೆಸರನ್ನು ಆ ರಾಜ್ಯದ ಸಾಂಸ್ಕೃತಿಕ ಬೇರು ಹಾಗೂ ಮಲಯಾಳಂ ಭಾಷೆಯ ಉಚ್ಚಾರಣೆಗೆ ಅನುಗುಣವಾಗಿ ‘ಕೇರಳಂ’ ಎಂದು ಬದಲಾಯಿಸುವ ಮಹತ್ವದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅಂಕಿತ ಹಾಕಲು ಸಜ್ಜಾಗಿದೆ.
ದಕ್ಷಿಣ ಭಾರತದ ರಾಜ್ಯವಾದ ಕೇರಳವನ್ನು ಇನ್ನು ಮುಂದೆ ಅಧಿಕೃತವಾಗಿ ‘ಕೇರಳಂ’ ಎಂದು ಕರೆಯುವ ಕಾಲ ಹತ್ತಿರ ಬಂದಿದೆ. ರಾಜ್ಯದ ಸಾಂಪ್ರದಾಯಿಕ ಅಸ್ಮಿತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕೇರಳ ವಿಧಾನಸಭೆಯು ಈಗಾಗಲೇ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದ್ದು, ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳಲ್ಲೂ ಹೆಸರನ್ನು ಬದಲಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಈ ಮೊದಲು ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಕೇಂದ್ರ ಗೃಹ ಸಚಿವಾಲಯವು ಕೆಲವು ತಾಂತ್ರಿಕ ಬದಲಾವಣೆಗಳನ್ನು ಸೂಚಿಸಿತ್ತು. ಅದರಂತೆ 25 ಜೂನ್ 2024 ರಂದು ಪರಿಷ್ಕೃತ ನಿರ್ಣಯವನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿತ್ತು.
ಈಗಾಗಲೇ ರಾಜ್ಯದಲ್ಲಿ 140 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಸನ್ನಿಹಿತವಾಗಿದ್ದು, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮತದಾನ ನಡೆಯುವ ಸಾಧ್ಯತೆಯಿದೆ. ಈ ಮಹತ್ವದ ಚುನಾವಣಾ ಘಟ್ಟಕ್ಕೆ ಮುನ್ನವೇ ಕೇಂದ್ರ ಸರ್ಕಾರವು ಈ ಹೆಸರಿನ ಬದಲಾವಣೆಗೆ ಮುದ್ರೆ ಒತ್ತಲು ನಿರ್ಧರಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನೇತೃತ್ವದ ಸರ್ಕಾರವು ಮಂಡಿಸಿದ ಈ ಪ್ರಸ್ತಾವನೆಯು ಸಾಕಾರಗೊಂಡರೆ, ಮಲಯಾಳಂ ಭಾಷಿಕರ ದಶಕಗಳ ಬೇಡಿಕೆ ಈಡೇರಿದಂತಾಗುತ್ತದೆ. ಈ ಸಾಂವಿಧಾನಿಕ ಬದಲಾವಣೆಯು ಕೇವಲ ಹೆಸರಿಗಷ್ಟೇ ಸೀಮಿತವಾಗದೆ, ರಾಜ್ಯದ ಭಾಷಾ ಮತ್ತು ಸಾಂಸ್ಕೃತಿಕ ಗರಿಮೆಯನ್ನು ರಾಷ್ಟ್ರಮಟ್ಟದಲ್ಲಿ ಅಧಿಕೃತವಾಗಿ ಸ್ಥಾಪಿಸಲಿದೆ.



































