
ತಿರುವನಂತಪುರ/ಬೆಂಗಳೂರು: ಕೇರಳ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ‘ಮಲಯಾಳ ಭಾಷಾ ಮಸೂದೆ-2025’ ಕನ್ನಡಿಗರ ಅಸ್ಮಿತೆಗೆ ಧಕ್ಕೆ ತರಲಿದೆ ಎಂಬ ಆತಂಕ ಕರ್ನಾಟಕದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ವಿವಾದದ ಕಿಚ್ಚು ಹತ್ತುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕನ್ನಡಿಗರ ಹಿತರಕ್ಷಣೆಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳುವ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮಸೂದೆಯ ವಿರುದ್ಧ ಕಠಿಣ ನಿಲುವು ತಳೆದು, ಕೇರಳ ಸರ್ಕಾರಕ್ಕೆ ಪತ್ರ ಬರೆದಿದ್ದರು. ಕನ್ನಡಿಗರ ಮೇಲೆ ಮಲಯಾಳ ಭಾಷೆ ಹೇರಿಕೆ ಮಾಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ, ಪಿಣರಾಯಿ ವಿಜಯನ್ ಶನಿವಾರ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಮೂಲಕ ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ. ಕೇರಳವು ಬಹುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಗೌರವಿಸುವ ರಾಜ್ಯವಾಗಿದ್ದು, ಯಾವುದೇ ಕಾರಣಕ್ಕೂ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.
ಕೇರಳದ ಗಡಿ ಭಾಗಗಳಲ್ಲಿ ವಾಸಿಸುವ ಕನ್ನಡ ಮತ್ತು ತಮಿಳು ಭಾಷಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ವಿಜಯನ್ ತಿಳಿಸಿದ್ದಾರೆ. ಶಾಲೆಗಳಲ್ಲಿ ಮಲಯಾಳ ಕಡ್ಡಾಯದ ಕುರಿತಾದ ಆತಂಕಕ್ಕೆ ಪ್ರತಿಕ್ರಿಯಿಸಿರುವ ಅವರು, ವಿದ್ಯಾರ್ಥಿಗಳು ರಾಷ್ಟ್ರೀಯ ಪಠ್ಯಕ್ರಮದ ಅಡಿಯಲ್ಲಿ ತಮಗೆ ಇಷ್ಟಬಂದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹೊಂದಿದ್ದಾರೆ. 9 ಮತ್ತು 10ನೇ ತರಗತಿ ಅಥವಾ ಹೈಯರ್ ಸೆಕೆಂಡರಿ ಹಂತದಲ್ಲಿ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಮಲಯಾಳ ಪರೀಕ್ಷೆ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಭಾಷಿಕರು ತಮ್ಮ ಮಾತೃಭಾಷೆಯಲ್ಲೇ ವ್ಯವಹರಿಸಲು ಅವಕಾಶವಿದೆ ಮತ್ತು ಅಧಿಕಾರಿಗಳು ಅದೇ ಭಾಷೆಯಲ್ಲಿ ಉತ್ತರಿಸಲಿದ್ದಾರೆ ಎಂದು ವಿವರಿಸಿದ್ದಾರೆ.
ಆದರೆ, ಕೇರಳ ಸರ್ಕಾರದ ಈ ‘ಸಮಾಧಾನದ ಮಾತು’ಗಳನ್ನು ಕರ್ನಾಟಕದ ಕನ್ನಡ ಪರ ಸಂಘಟನೆಗಳು ಮತ್ತು ಸರ್ಕಾರ ಅಷ್ಟು ಸುಲಭವಾಗಿ ಒಪ್ಪುವಂತೆ ಕಾಣುತ್ತಿಲ್ಲ. ಕಾಸರಗೋಡು ಸೇರಿದಂತೆ ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಮಲಯಾಳ ಭಾಷೆಯನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸಿರುವುದರ ವಿರುದ್ಧ ಈಗಾಗಲೇ ಹೋರಾಟದ ರೂಪುರೇಷೆಗಳು ಸಿದ್ಧವಾಗುತ್ತಿವೆ.



































