
ಬೆಂಗಳೂರು: ನಟಿ ರನ್ಯಾ ರಾವ್‌ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೀಡಲಾದ ಶಿಷ್ಟಾಚಾರದ ಸೌಲಭ್ಯಗಳ ದುರುಪಯೋಗ ಕುರಿತು ಹಿರಿಯ ಅಧಿಕಾರಿ ಗೌರವ್ ಗುಪ್ತ ನೇತೃತ್ವದ ಐಎಎಸ್ ಅಧಿಕಾರಿಗಳ ತಂಡ ತನಿಖೆಯನ್ನು ಪೂರ್ಣಗೊಳಿಸಿದ್ದು, ಸೋಮವಾರ ಸರ್ಕಾರಕ್ಕೆ ತನ್ನ ಗುಪ್ತ ವರದಿಯನ್ನು ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.
100ಕ್ಕೂ ಹೆಚ್ಚು ಪುಟಗಳ ಈ ವರದಿಯಲ್ಲಿ ಡಿಜಿಪಿ ರಾಮಚಂದ್ರ ರಾವ್‌ಗೆ ನೀಡಲಾದ ಶಿಷ್ಟಾಚಾರ ಸೌಲಭ್ಯ ಉಲ್ಲಂಘನೆಯಾಗಿರುವುದು ನಿಜವೆಂದು ಪ್ರಸ್ತಾಪಿಸಲಾಗಿದೆ. ಅವರ ಪುತ್ರಿ ನಟಿ ರನ್ಯಾ ರಾವ್ ಇದನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಸೇರಿದಂತೆ ಹಲವಾರು ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗೌರವ್ ಗುಪ್ತ, ವರದಿಯ ವಿಷಯವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೀಗ, ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಜಾಮೀನು ಕೋರಿ ನಟಿ ರನ್ಯಾ ರಾವ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ನಗರ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸೋಮವಾರ ನಡೆದ ವಿಚಾರಣೆಯಲ್ಲಿ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯದ ಪರ ವಕೀಲರು ವಾದ ಮಂಡಿಸಬೇಕಾಗಿತ್ತು. ಆದರೆ, ಕಾಲಾವಕಾಶದ ಕೊರತೆಯಿಂದ ನ್ಯಾಯಾಧೀಶ ಐ.ಪಿ. ನಾಯಿಕ್ ವಿಚಾರಣೆಯನ್ನು ಮುಂದೂಡಿದರು.