

ಕಾಪು: ಶ್ರೀ ಹೊಸ ಮಾರಿಗುಡಿ ದೇವಾಲಯದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಭಕ್ತಾದಿಗಳ ನಿಷ್ಠಾ ಸಮರ್ಪಣೆಯಾದ ಸ್ವರ್ಣ ಗದ್ದುಗೆ, ರಜತ ರಥ, ಬೃಹತ್ ಘಂಟೆ, ಚಿನ್ನದ ಶ್ರೀಪಾದಪೀಠ, ಚಿನ್ನದ ಮುಖ ಹಾಗೂ ರಾಜಗೋಪುರದ ಹೆಬ್ಬಾಗಿಲು ಪುರಪ್ರವೇಶವು ಬಹಳ ಅದ್ದೂರಿಯಾಗಿ ಶೋಭಾಯಾತ್ರೆಯೊಂದಿಗೆ ಜರುಗಿತು. ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮತ್ತು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಫೆಬ್ರವರಿ.9ರಂದು ದಂಡತೀರ್ಥ ಮಠದ ಬಳಿ ಶೋಭಾಯಾತ್ರೆಗೆ ಚಾಲನೆ ನೀಡಿದರು.
15 ಕೋಟಿ ರೂ. ವೆಚ್ಚದ ಮಹಾಸಮರ್ಪಣೆ
ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣೆ ಸಮಿತಿ ನೇತೃತ್ವದಲ್ಲಿ ಭಕ್ತಾದಿಗಳಿಂದ ಸಂಗ್ರಹಿಸಿದ ಚಿನ್ನದೊಂದಿಗೆ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮಾರಿಯಮ್ಮ ದೇವಿಯ ಸ್ವರ್ಣ ಗದ್ದುಗೆ ಹಾಗೂ ಚಿನ್ನದ ಮುಖ ಭಕ್ತರ ಸೇವೆಗೆ ಲಭಿಸಿದೆ. ಮುಂಬಯಿಯ ಆರ್ಗಾನಿಕ್ ಇಂಡಸ್ಟ್ರೀಸ್ ಎಂಡಿ ತೋನ್ಸೆ ಆನಂದ ಎಂ. ಶೆಟ್ಟಿ – ಶಶಿರೇಖಾ ಆನಂದ ಶೆಟ್ಟಿ ದಂಪತಿ ರಜತ ರಥವನ್ನು ಸಮರ್ಪಿಸಿದ್ದು, ಮುಂಬಯಿ ಅಲಯನ್ಸ್ ಇನ್‌ಫ್ರಾಸ್ಟ್ರಕ್ಟರ್ ಆ್ಯಂಡ್ ರೆಯಲ್ಬರ್ಸ್ ಸಿಎಂಡಿ ಅರವಿಂದ್ ಶೆಟ್ಟಿ ಮತ್ತು ಪಲ್ಲವಿ ಶೆಟ್ಟಿ ದಂಪತಿ ಬೃಹತ್ ಘಂಟೆಯನ್ನು ಸಮರ್ಪಿಸಿದರು.
ರಾಜಗೋಪುರದ ಹೆಬ್ಬಾಗಿಲು ಸಮರ್ಪಣೆ
ಉಳಿಯಾರ ಗೋಳಿ ರಾಧಾಛಾಯ ದಿ| ಸುಂದರ ಶೆಟ್ಟಿ ಅವರ ಕುಟುಂಬದವರು ಹಾಗೂ ಮುಂಬಯಿ ತುಂಗಾ ಗ್ರೂಪ್ಸ್ ಆಡಳಿತ ಸಿಎಂಡಿ ಎಂ. ಸುಧಾಕರ ಹೆಗ್ಡೆ – ರಂಜನಿ ಸುಧಾಕರ ಹೆಗ್ಡೆ ದಂಪತಿ ರಾಜಗೋಪುರದ ಹೆಬ್ಬಾಗಿಲು ಸಮರ್ಪಿಸಿದರು. ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ – ಬೀನಾ ವಾಸುದೇವ ಶೆಟ್ಟಿ ದಂಪತಿ ಉಚ್ಚಂಗಿ ದೇವಿಯ ಚಿನ್ನದ ಮುಖವನ್ನು ಸಮರ್ಪಿಸಿದರು.
ಈ ಮಹತ್ಕಾರ್ಯಕ್ಕೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಸುನಿಲ್ ಕುಮಾರ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಬಿ. ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಲಾಲಾಜಿ ಮೆಂಡನ್, ಕೆ. ರಘುಪತಿ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ| ಕೆ. ಪ್ರಕಾಶ್ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಸ್ವರ್ಣ ಗದ್ದುಗೆ ಸಮರ್ಪಣೆ ಸಮಿತಿ ಅಧ್ಯಕ್ಷ ರವಿ ಸುಂದರ್ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.