
ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಪ್ರಗತಿ ಹಾಗೂ ಜನಪರ ಕಾರ್ಯಗಳಿಗೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದ್ದಾರೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂತಹ ಸಂಘರ್ಷದ ರಾಜಕೀಯ ಮುಂದುವರಿದರೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದು ಅಭಿವೃದ್ಧಿ ಕೆಲಸಕ್ಕೂ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು ಒತ್ತಡ ಹೇರುವ ಮೂಲಕ ಪ್ರಗತಿ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ದೂರಿದರು.
ಕಂಬಳದ ಸುತ್ತ ಕುತಂತ್ರದ ರಾಜಕಾರಣ
ಕಂಬಳ ಆಯೋಜನೆಯ ಕುರಿತು ಮಾಹಿತಿ ನೀಡಿದ ಶಾಸಕರು, “ಸುಮಾರು 6 ತಿಂಗಳ ಹಿಂದೆಯೇ ಎಸಿ ಮತ್ತು ಡಿಸಿ ಸೇರಿದಂತೆ ಸರ್ಕಾರಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಗಡಿ ಗುರುತು ಮಾಡಿದ್ದರು. ಇದೇ ಸರ್ಕಾರ 6.30 ಎಕರೆ ಭೂಮಿಯನ್ನು ಯುವಜನ ಸಬಲೀಕರಣ ಇಲಾಖೆಗೆ ಮಂಜೂರು ಮಾಡಿದೆ. ಕಂಬಳ ಸಮಿತಿಯನ್ನು ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ರಚಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಮಂತ್ರಣ ಪತ್ರಿಕೆಯ ನಕಲು ಕಳುಹಿಸಿ ಅವರಿಂದಲೇ ಒಪ್ಪಿಗೆ ಪಡೆಯಲಾಗಿತ್ತು. ಆಮಂತ್ರಣದಲ್ಲಿ ಕಾಂಗ್ರೆಸ್ ನಾಯಕರ ಭಾವಚಿತ್ರವನ್ನೂ ಮುದ್ರಿಸಲಾಗಿದೆ. ಆದರೆ, ಈಗ ಕೊನೆಯ ಕ್ಷಣದಲ್ಲಿ ಸೊರಕೆ ಅವರು ಉಸ್ತುವಾರಿ ಸಚಿವರ ಮೇಲೆ ಒತ್ತಡ ಹಾಕಿ ಕಂಬಳ ನಿಲ್ಲಿಸುವ ಕುತಂತ್ರ ಮಾಡುತ್ತಿದ್ದಾರೆ. ಇದು ಕರಾವಳಿಯ ಬಗ್ಗೆ ಸರ್ಕಾರದ ಅಸಡ್ಡೆ ಮತ್ತು ಮಲತಾಯಿ ಧೋರಣೆಯನ್ನು ಸಾಬೀತುಪಡಿಸಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಕೈಗೊಂಬೆಗಳಾಗಬಾರದು
ಇದೇ ವೇಳೆ ಮಾತನಾಡಿದ ಕಾರ್ಕಳ ಶಾಸಕ ಸುನಿಲ್ ಕುಮಾರ್, “ಕಂಬಳ ನಡೆಯಬಾರದು ಮತ್ತು ಅದರ ಕೀರ್ತಿ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಸಿಗಬಾರದು ಎಂಬ ಏಕೈಕ ಕಾರಣಕ್ಕೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳು ಅಧಿಕಾರಿಗಳ ಮೂಲಕ ಅಡ್ಡಿಪಡಿಸುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆ ಉಂಟುಮಾಡುವುದೇ ಕಾಂಗ್ರೆಸ್‌ನ ಹಿಡನ್ ಅಜೆಂಡಾ ಆಗಿದೆ. ಅಧಿಕಾರಿಗಳು ರಾಜಕೀಯ ನಾಯಕರ ಕೈಗೊಂಬೆಗಳಂತೆ ವರ್ತಿಸುವುದನ್ನು ನಾವು ಸಹಿಸುವುದಿಲ್ಲ,” ಎಂದು ಎಚ್ಚರಿಸಿದರು.
ಉಗ್ರ ಹೋರಾಟದ ಎಚ್ಚರಿಕೆ
ಸರ್ಕಾರ ಅನುದಾನ ನೀಡಲಿ ಅಥವಾ ಬಿಡಲಿ, ಕಂಬಳ ಸಮಿತಿಯೇ ಕಾರ್ಯಕ್ರಮವನ್ನು ನಿರ್ವಹಿಸುತ್ತದೆ. ಆದರೆ, ರಾಜಕೀಯ ಕಾರಣಕ್ಕಾಗಿ ಉಡುಪಿ ಕಂಬಳಕ್ಕೆ ಇನ್ನೊಮ್ಮೆ ಭೂಮಿಪೂಜೆ ನಡೆಸಲು ಮುಂದಾದರೆ ನಾವು ಸುಮ್ಮನಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.



































