
ಕಾಪು: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಇದೀಗ ಕರಾವಳಿಯ ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್‌ಗಳ ಮೇಲೂ ನೆರಳು ಬೀರಿದೆ. ಅನಿಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಕಾಪು ಪರಿಸರದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದ್ದು, ಜನಸಾಮಾನ್ಯರ ನೆಚ್ಚಿನ ಇಂದಿರಾ ಕ್ಯಾಂಟೀನ್ ಸಂಕಷ್ಟಕ್ಕೆ ಸಿಲುಕಿದೆ.
ಕಳೆದ ಕೆಲವು ದಿನಗಳಿಂದ ಗ್ಯಾಸ್ ಲಭ್ಯವಿಲ್ಲದೆ ಅಡುಗೆ ಸ್ಥಗಿತಗೊಂಡಿದ್ದರಿಂದ ಇಲ್ಲಿನ ಗ್ರಾಹಕರು ತೀವ್ರ ಪರದಾಡುವಂತಾಗಿತ್ತು. ಆದರೆ, ನಿರಂತರವಾಗಿ ಬರುವ ಸಾರ್ವಜನಿಕರ ಒತ್ತಾಯ ಮತ್ತು ಹಸಿವಿನ ಕೂಗಿಗೆ ಸ್ಪಂದಿಸಿರುವ ಕ್ಯಾಂಟೀನ್ ಸಿಬ್ಬಂದಿ, ಇದೀಗ ಅನಿಲದ ಬದಲು ಸೌದೆ ಒಲೆಯನ್ನು ಆಶ್ರಯಿಸುವ ಮೂಲಕ ಆಹಾರ ಸಿದ್ಧಪಡಿಸಲು ಮುಂದಾಗಿದ್ದಾರೆ.
ತಾಲೂಕು ಆಡಳಿತ ಸೌಧದ ಸಮೀಪವೇ ಇರುವ ಈ ಕ್ಯಾಂಟೀನ್‌ನಲ್ಲಿ ಗ್ಯಾಸ್ ಇಲ್ಲದೆ ಸುಮಾರು 3 ರಿಂದ 4 ದಿನಗಳ ಕಾಲ ಆಹಾರ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಅಗ್ಗದ ದರದಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಬರುತ್ತಿದ್ದ ಕಾರ್ಮಿಕರು ಹಾಗೂ ಬಡವರು ಅಡುಗೆ ಇಲ್ಲದೆ ನಿರಾಸೆಯಿಂದ ಮರಳುತ್ತಿದ್ದರು. ಈ ಪರಿಸ್ಥಿತಿಯನ್ನು ನಿಭಾಯಿಸಲು ಕ್ಯಾಂಟೀನ್ ಆವರಣದ ಹೊರಭಾಗದಲ್ಲಿ ಸೌದೆ ಒಲೆ ಹೂಡಿ ಅಡುಗೆ ಮಾಡುವ ಅನಿವಾರ್ಯತೆ ಎದುರಾಗಿದೆ.
ಬದಲಾದ ಆಹಾರ ಪಟ್ಟಿ (Menu):
ಅನಿಲದ ಅಭಾವ ಕೇವಲ ಅಡುಗೆ ಮಾಡುವ ವಿಧಾನವನ್ನಷ್ಟೇ ಬದಲಿಸಿಲ್ಲ, ಬದಲಾಗಿ ದಿನನಿತ್ಯದ ಮೆನುವಿನ ಮೇಲೂ ಪರಿಣಾಮ ಬೀರಿದೆ. ಹೆಚ್ಚಿನ ಉರಿ ಮತ್ತು ಸಮಯ ಬೇಕಾಗುವ ಇಡ್ಲಿ ಹಾಗೂ ಮಧ್ಯಾಹ್ನದ ಚಪಾತಿ ಪೂರೈಕೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಇದರ ಬದಲಾಗಿ ಸೌದೆ ಒಲೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಪಲಾವ್, ಟೊಮೆಟೊ ಬಾತ್, ಉಪ್ಪಿಟ್ಟು (ಸಜ್ಜಿಗೆ) ಮತ್ತು ಅವಲಕ್ಕಿಯಂತಹ ತಿಂಡಿಗಳನ್ನು ಮಾತ್ರ ಗ್ರಾಹಕರಿಗೆ ನೀಡಲಾಗುತ್ತಿದೆ.
ಮಧ್ಯಾಹ್ನ ಮತ್ತು ರಾತ್ರಿಯ ಭೋಜನದಲ್ಲೂ ವೈವಿಧ್ಯತೆ ಮಾಯವಾಗಿದ್ದು, ಕೇವಲ ಅನ್ನ ಮತ್ತು ಸಾಂಬಾರ್‌ಗೆ ಸೀಮಿತಗೊಳಿಸಲಾಗಿದೆ ಎಂದು ಕ್ಯಾಂಟೀನ್ ಮೂಲಗಳು ತಿಳಿಸಿವೆ. ಅನಿಲದ ಪೂರೈಕೆ ಸಹಜ ಸ್ಥಿತಿಗೆ ಬರುವವರೆಗೆ ಇದೇ ಪರ್ಯಾಯ ವ್ಯವಸ್ಥೆ ಮುಂದುವರಿಯುವ ಸಾಧ್ಯತೆ ಇದೆ. ಒಂದು ಕಡೆ ಗ್ಯಾಸ್ ಸಿಗುತ್ತಿಲ್ಲ, ಇನ್ನೊಂದು ಕಡೆ ಸೌದೆ ಒಲೆಯಲ್ಲಿ ಅಡುಗೆ ಮಾಡುವುದು ಸಿಬ್ಬಂದಿಗೆ ಸವಾಲಾಗಿದ್ದರೂ, ಬಡವರ ಹಸಿವು ನೀಗಿಸುವ ನಿಟ್ಟಿನಲ್ಲಿ ಈ ಸಾಹಸಕ್ಕೆ ಕೈಹಾಕಿದ್ದಾರೆ.




































