
ಕಾಪು : ಉಡುಪಿ ಜಿಲ್ಲೆಯ ಕಾಪು ಸಮೀಪ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ವೇಗವಾಗಿ ಬಂದ ಕ್ರೆಟಾ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಪೀರ್ ಮೊಹಮ್ಮದ್ ಎಂದು ಗುರುತಿಸಲಾಗಿದೆ.
ಈ ಘಟನೆ ಭಾನುವಾರ ಮಧ್ಯಾಹ್ನ 3:50ರ ಸುಮಾರಿಗೆ ಕಾಪು ಮೌಂಟ್ರಾ ಎಲೆಕ್ಟ್ರಿಕ್ ಆಟೋ ಶೋರೂಂ ಸಮೀಪ ನಡೆದಿದೆ. ಮಂಗಳೂರಿನಿಂದ ಉಡುಪಿ ಕಡೆಗೆ ಬರುತ್ತಿದ್ದ KA-19-MM-4595 ನಂಬರಿನ ಕಪ್ಪು ಬಣ್ಣದ ಕ್ರೆಟಾ ಕಾರು, ರಸ್ತೆಯ ಡಿವೈಡರ್ ತಲುಪುತ್ತಿದ್ದ ಪೀರ್ ಮೊಹಮ್ಮದ್ ಅವರಿಗೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ಕಾರಿನ ಮುಂಬದಿಯ ಬಾನೆಟ್ ಮತ್ತು ಗಾಜಿಗೆ ತಗುಲಿ ರಸ್ತೆಗೆ ಬಿದ್ದ ಪೀರ್ ಮೊಹಮ್ಮದ್ ಅವರ ತಲೆ ಹಾಗೂ ದೇಹಕ್ಕೆ ಗಂಭೀರ ಪೆಟ್ಟಾಗಿತ್ತು. ಅವರನ್ನು ಕೂಡಲೇ ಸ್ಥಳೀಯರ ಸಹಾಯದಿಂದ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದರು.
ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.