
ಕೌಡೂರು : ಕೌಡೂರು ಗ್ರಾಮದ ಸುಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುನರ್ನವೀಕರಣದ ಮಹತ್ವದ ಘಟ್ಟವಾಗಿ ವಿವಿಧ ಧಾರ್ಮಿಕ ಪ್ರಾಯಶ್ಚಿತ ವಿಧಿವಿಧಾನಗಳು ಆರಂಭಗೊಳ್ಳುತ್ತಿವೆ. ಕ್ಷೇತ್ರದ ಪಾವಿತ್ರ್ಯತೆಯನ್ನು ಹೆಚ್ಚಿಸುವ ಹಾಗೂ ಜೀರ್ಣೋದ್ಧಾರ ಕಾರ್ಯಗಳು ಸುಸೂತ್ರವಾಗಿ ನೆರವೇರುವ ಉದ್ದೇಶದಿಂದ 10-01-2026 ರಿಂದ 12-01-2026 ರವರೆಗೆ ಮೂರು ದಿನಗಳ ಕಾಲ ಅತ್ಯಂತ ಭಕ್ತಿ-ಭಾವದಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದೇವಸ್ಥಾನದ ಆಡಳಿತ ಮಂಡಳಿ, ಅರ್ಚಕರು ಹಾಗೂ ಗ್ರಾಮಸ್ಥರ ಸಹಭಾಗಿತ್ವದಲ್ಲಿ ನಡೆಯುವ ಈ ಧಾರ್ಮಿಕ ಉತ್ಸವವು ಶನಿವಾರ ಬೆಳಿಗ್ಗೆ 9 ಗಂಟೆಗೆ ಚಾಲನೆ ಪಡೆಯಲಿದೆ. ಅಂದು ಗಣಹೋಮ, ನಾಗಾರಾಧನೆ ಮತ್ತು ಏಕಾದಶ ರುದ್ರಾಭಿಷೇಕದಂತಹ ಪ್ರಮುಖ ಸೇವೆಗಳು ಜರುಗಲಿವೆ. ಭಕ್ತರಿಗಾಗಿ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಆಯೋಜಿಸಲಾಗಿದ್ದು, ಸಂಜೆ ದೀಪಾರಾಧನೆ ಹಾಗೂ ರಂಗಪೂಜೆಯ ವೈಭವದ ದೃಶ್ಯಗಳು ಕಣ್ಮನ ಸೆಳೆಯಲಿವೆ.
ಎರಡನೇ ದಿನವಾದ ಭಾನುವಾರ ಪೂರ್ಣ ದಿನದ ಭಜನಾ ಸಂಕೀರ್ತನೆ, ನವಗ್ರಹ ಯಾಗ ಹಾಗೂ ಅಘೋರ ಬಲಿಯಂತಹ ವಿಶೇಷ ತಾಂತ್ರಿಕ ವಿಧಿಗಳು ನಡೆಯಲಿವೆ. ಸೋಮವಾರ ವಾಸ್ತು ರಾಕ್ಷೋಘ್ನ ಪೂಜೆಯೊಂದಿಗೆ ಈ ಹಂತದ ಧಾರ್ಮಿಕ ಪ್ರಕ್ರಿಯೆಗಳು ಸಂಪನ್ನಗೊಳ್ಳಲಿವೆ. ಈ ಮಹತ್ಕಾರ್ಯದಲ್ಲಿ ಭಾಗಿಯಾಗಿ ಪುನೀತರಾಗುವಂತೆ ಕ್ಷೇತ್ರದ ತಂತ್ರಿಯವರು ಹಾಗೂ ಊರ ಸಮಸ್ತರು ಭಕ್ತಾಧಿಗಳಿಗೆ ಆತ್ಮೀಯ ಆಮಂತ್ರಣ ನೀಡಿದ್ದಾರೆ.



































