
ವಾಷಿಂಗ್ಟನ್ : ಅಮೆರಿಕದ ಸಿಎನ್‌ಎನ್ (CNN) ಸುದ್ದಿ ವಾಹಿನಿಯಲ್ಲಿ ಜಮ್ಮು-ಕಾಶ್ಮೀರದ ಕುರಿತು ನೀಡಲಾದ ತಪ್ಪು ಮಾಹಿತಿಗೆ ಭಾರತದ ರಾಯಭಾರಿ ವಿನಯ್ ಕ್ವಾತ್ರಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಸಿಎನ್‌ಎನ್ (CNN) ಸುದ್ದಿ ವಾಹಿನಿಯ ನಿರೂಪಕ ಭಾರತೀಯ ಆಡಳಿತವಿರುವ ಕಾಶ್ಮೀರ ಎಂಬುದಾಗಿ ತಪ್ಪು ಮಾಹಿತಿ ನೀಡಿದಾಗ , “ಕ್ಷಮಿಸಿ, ನಿಮ್ಮ ಹೇಳಿಕೆಯಲ್ಲಿ ತಪ್ಪಿದೆ. ಜಮ್ಮು-ಕಾಶ್ಮೀರ ಸಂಪೂರ್ಣವಾಗಿ ಭಾರತದ ಅವಿಭಾಜ್ಯ ಅಂಗ. ಪಾಕಿಸ್ಥಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾಗವನ್ನು ಮಾತ್ರ ನಾವು ಹಿಂಪಡೆದುಕೊಳ್ಳಬೇಕಾಗಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ” ಎಂದು ಕ್ವಾತ್ರಾ ಖಡಕ್ಕಾಗಿ ತಿಳಿಸಿದ್ದಾರೆ.
ಅದರ ಜೊತೆಗೆ ಪಾಕಿಸ್ಥಾನ ಭಯೋತ್ಪಾದಕರಿಗೆ ನೀಡುತ್ತಿರುವ ಬೆಂಬಲವನ್ನು ವಿರೋಧಿಸಿ ಮಾತನಾಡಿದ ಅವರು, “ಭಯೋತ್ಪಾದಕರಿಗೆ ಆಶ್ರಯ ನೀಡುವ ಬದಲು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಪಾಕಿಸ್ತಾನದ ಕರ್ತವ್ಯ. ಭಾರತ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ ನಿಲುವನ್ನು ಹೊಂದಿದೆ. ಪಹೆಲ್ಗಾಂ ಉಗ್ರ ದಾಳಿಯಂತಹ ಘಟನೆಗೆ ತಕ್ಕ ಪ್ರತಿಕ್ರಿಯೆ ನೀಡುವುದು ನಮ್ಮ ಕರ್ತವ್ಯವಾಗಿದೆ,” ಎಂದು ಹೇಳಿದ್ದಾರೆ.
ಭಯೋತ್ಪಾದನೆಗೆ ಧರ್ಮದ ಹೆಸರು ಕೇಳಿ ಪ್ರವಾಸಿಗರನ್ನು ಕೊಂದವರಿಗೆ ಮತ್ತು ಭಯೋತ್ಪಾದನೆಗೆ ಪ್ರಚೋದನೆ ನೀಡಿದವರಿಗೆ ತಕ್ಕ ಪ್ರತಿಕ್ರಿಯೆ ನೀಡಿದ್ದೇವೆ ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವು ಶಾಂತಿ ಮತ್ತು ನ್ಯಾಯಕ್ಕಾಗಿ ಬದ್ಧವಿರುವುದನ್ನು ಪುನರ್ ಉಲ್ಲೇಖಿಸಿದ್ದಾರೆ.