
ಕಾರ್ಕಳ: ಕಾರ್ಕಳ ತಾಲೂಕಿನ ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಕ ಮಕಾಂದರ್ ಎಂಬುವವರು ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿ ಹಿಂದೂ ಧಾರ್ಮಿಕ ಭಾವನೆಗೆ ನಿಂದನೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಚಿಂತಕಿ ಶ್ರೀಮತಿ ರಮಿತಾ ಸೂರ್ಯವಂಶಿ ಅವರು ಶಿಕ್ಷಕರ ವಿರುದ್ಧ ಶೀಘ್ರ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಜನಿವಾರ ಪವಿತ್ರತೆಯ ಉಲ್ಲಂಘನೆ:
ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಮತಿ ರಮಿತಾ ಸೂರ್ಯವಂಶಿ ಅವರು, “ಹಿಂದೂ ಧರ್ಮದಲ್ಲಿ ಜನಿವಾರಕ್ಕೆ ತನ್ನದೇ ಆದ ಪವಿತ್ರತೆ ಮತ್ತು ಮಹತ್ವವಿದೆ. ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿರುವುದು ಹಿಂದೂ ಧಾರ್ಮಿಕ ಭಾವನೆಗಳಿಗೆ ಮಾಡಿದ ನೇರ ನಿಂದನೆಯಾಗಿದೆ” ಎಂದು ಖಂಡಿಸಿದ್ದಾರೆ.
ದೈಹಿಕ ಶಿಕ್ಷಕ ಮಕಾಂದರ್ ಅವರು, ಜನಿವಾರ ಧರಿಸಿದವರು ಕ್ರೀಡೆಯಲ್ಲಿ ಭಾಗವಹಿಸುವಂತಿಲ್ಲ ಎಂಬಂತಹ ವಿಚಿತ್ರ ಮಾನಸಿಕತೆಯನ್ನು ಚಿಕ್ಕ ಮಕ್ಕಳ ಮೇಲೆ ಹೇರಿ, ದರ್ಪ ತೋರಿಸಿ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿರುವುದು ಸರಿಯಲ್ಲ. ಇಂತಹ ನಡೆ ಖಂಡನೀಯ ಮತ್ತು ಅಕ್ಷಮ್ಯ ಎಂದು ಸೂರ್ಯವಂಶಿ ಹೇಳಿದ್ದಾರೆ.
ಜನಿವಾರದ ಮಹತ್ವ:
“ಜನಿವಾರವು ಹಿಂದೂ ಧರ್ಮದಲ್ಲಿ ಧರಿಸುವ ಅತ್ಯಂತ ಪವಿತ್ರವಾದ ದಾರವಾಗಿದೆ. ಇದು ಗಾಯತ್ರಿ ಮಂತ್ರವನ್ನು ಪಠಿಸುವ ಅರ್ಹತೆಯನ್ನು ಪಡೆಯುವುದರ ಸಂಕೇತವಾಗಿದೆ. ಇದರ ಮೂರು ಎಳೆಗಳು ಹಿಂದೂ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮತ್ತು ಶಿವನನ್ನು ಪ್ರತಿನಿಧಿಸುತ್ತವೆ. ಇದು ಕೇವಲ ಧಾರ್ಮಿಕ ಸಂಕೇತ ಮಾತ್ರವಲ್ಲದೆ, ಮಾನಸಿಕ ಮತ್ತು ಶಾರೀರಿಕ ಆರೋಗ್ಯಕ್ಕೂ ಸಹಾಯಕ ಎಂದು ನಂಬಲಾಗಿದೆ” ಎಂದು ಅವರು ಜನಿವಾರದ ಮಹತ್ವವನ್ನು ವಿವರಿಸಿದರು.

ಇಂತಹ ಪವಿತ್ರ ನಂಬಿಕೆಗೆ ಅವಮಾನವಾಗುವ ಘಟನೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಶಿಕ್ಷಕರ ಈ ನಡೆಯು ಮಕ್ಕಳಿಗೆ ಧರ್ಮದ ಹೆಸರಿನಲ್ಲಿ ಮತಾಂಧ ನೀತಿಯನ್ನು ಹೇರಿದಂತೆ ಸಮಾಜಕ್ಕೆ ಭಾಸವಾಗುತ್ತಿದೆ. ಇಂತಹ ಶಿಕ್ಷಕರು ಶಿಕ್ಷಣ ಕ್ಷೇತ್ರಕ್ಕೆ ಅನರ್ಹರು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದ್ದರಿಂದ, ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಕ ಮಕಾಂದರ್ ಅವರ ಮೇಲೆ ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಶೀಘ್ರದಲ್ಲಿ ಸೂಕ್ತವಾದ ಮತ್ತು ಕಠಿಣವಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶ್ರೀಮತಿ ರಮಿತಾ ಸೂರ್ಯವಂಶಿ ಅವರು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳನ್ನು ಒತ್ತಾಯಿಸಿದ್ದಾರೆ.



































