
ಮಂಗಳೂರು: ಕರಾವಳಿಯ ಹೆಮ್ಮೆಯ ಜಾನಪದ ಕ್ರೀಡೆ ‘ಕಂಬಳ’ಕ್ಕೆ ರಾಜ್ಯ ಕ್ರೀಡೆಯ ಅಧಿಕೃತ ಮಾನ್ಯತೆ ದೊರೆತ ಬೆನ್ನಲ್ಲೇ, ಈ ಕ್ರೀಡೆಯನ್ನು ರಾಜ್ಯದ ಮೂಲೆ ಮೂಲೆಗೂ ಪಸರಿಸಲು ಸಿದ್ಧತೆಗಳು ಆರಂಭವಾಗಿವೆ. ಇನ್ನು ಮುಂದೆ ತುಳುನಾಡಿನ ಕೆಸರುಗದ್ದೆಯ ಓಟ ಕೇವಲ ಕರಾವಳಿ ಜಿಲ್ಲೆಗಳಿಗೆ ಸೀಮಿತವಾಗದೆ ಶಿವಮೊಗ್ಗ, ಮೈಸೂರು ಹಾಗೂ ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲೂ ಅಬ್ಬರಿಸಲಿದೆ.
ಕರ್ನಾಟಕ ರಾಜ್ಯ ಕಂಬಳ ಸಂಸ್ಥೆಯ ಅಧ್ಯಕ್ಷರಾದ ದೇವಿ ಪ್ರಸಾದ್ ಶೆಟ್ಟಿ ಬೆಳಪು ಅವರು ಈ ಮಹತ್ವದ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಮೈಸೂರಿನ ದಸರಾ ಸಂಭ್ರಮಕ್ಕೆ ಕಂಬಳದ ಮೆರುಗು ನೀಡುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಶೇಷ ಆಸಕ್ತಿ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮೈಸೂರಿನಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ವಿಶ್ವಪ್ರಸಿದ್ಧ ದಸರಾ ಮಹೋತ್ಸವದ ಸಂದರ್ಭದಲ್ಲಿ ಕಂಬಳ ಆಯೋಜಿಸುವ ಸಾಧ್ಯತೆಗಳು ದಟ್ಟವಾಗಿವೆ.
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಮತ್ತು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ಕಂಬಳ ಕೂಟಗಳನ್ನು ಸಂಘಟಿಸಲು ಉದ್ದೇಶಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಈ ಸಾಂಪ್ರದಾಯಿಕ ಕ್ರೀಡೆಯನ್ನು ಪರಿಚಯಿಸಲು ಸಚಿವ ಮಂಕಾಳ ವೈದ್ಯ ಅವರು ಉತ್ಸಾಹ ತೋರಿದ್ದಾರೆ. ಕೇವಲ ಕ್ರೀಡೆಯಾಗಿ ಮಾತ್ರವಲ್ಲದೆ, ಕಂಬಳ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕ್ರೀಡಾಪಟುಗಳು ಮತ್ತು ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ‘ಕಾರ್ಮಿಕ ಕಾರ್ಡ್’ ನೀಡುವ ಬಗ್ಗೆಯೂ ಗಂಭೀರ ಚರ್ಚೆಗಳು ನಡೆಯುತ್ತಿವೆ. ಈ ಮೂಲಕ ಕರಾವಳಿಯ ಈ ಸಾಂಸ್ಕೃತಿಕ ವೈಭವ ಇಡೀ ರಾಜ್ಯದ ಕ್ರೀಡೆಯಾಗಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ.




































