
ಬೆಂಗಳೂರು: ಎಸ್‌ಎಸ್‌ಎಲ್‌ಸಿ (SSLC) ಮತ್ತು ದ್ವಿತೀಯ ಪಿಯುಸಿ ಅಭ್ಯರ್ಥಿಗಳ ಕನಿಷ್ಠ ತೇರ್ಗಡೆ ಅಂಕಗಳನ್ನು ಶೇ. 35 ರಿಂದ ಶೇ. 33ಕ್ಕೆ ಇಳಿಕೆ ಮಾಡಿ ರಾಜ್ಯ ಸರ್ಕಾರ ಅಂತಿಮ ಆದೇಶ ಹೊರಡಿಸಿದೆ. ಈ ಕುರಿತು ಹೊರಡಿಸಲಾಗಿದ್ದ ಕರಡು ಅಧಿಸೂಚನೆಗೆ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಈ ಕುರಿತು ಮಾಹಿತಿ ನೀಡಿದ್ದು, ಹೊಸ ಪರಿಷ್ಕೃತ ನಿಯಮದ ಪ್ರಮುಖಾಂಶಗಳು ಹೀಗಿವೆ:
ಎಸ್‌ಎಸ್‌ಎಲ್‌ಸಿ ತೇರ್ಗಡೆ ನಿಯಮಗಳು (625 ಅಂಕಗಳಿಗೆ):
- ಕನಿಷ್ಠ ಅಂಕ: ಅಭ್ಯರ್ಥಿಗಳು ಒಟ್ಟು 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು (ಶೇ. 33) ಗಳಿಸಬೇಕು.
- ಹಿಂದಿನ ನಿಯಮ: ಈ ಮೊದಲು ಒಟ್ಟು ಶೇ. 35 ಅಂಕ (219 ಅಂಕ) ಕಡ್ಡಾಯವಾಗಿತ್ತು.
- ಒಳಾಂಗಣ ಮತ್ತು ಬಾಹ್ಯ: ಆಂತರಿಕ ಮೌಲ್ಯಮಾಪನ ಮತ್ತು ಬಾಹ್ಯ ಪರೀಕ್ಷೆ ಎರಡೂ ಸೇರಿ ಈ ಕನಿಷ್ಠ ಶೇ. 33 ಅಂಕ ಪಡೆದಿರಬೇಕು. ಒಂದು ವೇಳೆ ಒಟ್ಟು 206 ಅಂಕ ಪಡೆದಿದ್ದಲ್ಲಿ, ಆಯಾ ವಿಷಯದ ಒಟ್ಟು ಅಂಕಗಳಲ್ಲಿ ಕನಿಷ್ಠ ಶೇ. 30 ಅಂಕ ಪಡೆದಿರಬೇಕು.
ದ್ವಿತೀಯ ಪಿಯುಸಿ ತೇರ್ಗಡೆ ನಿಯಮಗಳು (600 ಅಂಕಗಳಿಗೆ):
- ಕನಿಷ್ಠ ಅಂಕ: ದ್ವಿತೀಯ ಪಿಯುಸಿ ಉತ್ತೀರ್ಣಗೊಳ್ಳಲು ಅಭ್ಯರ್ಥಿಯು ಗರಿಷ್ಠ 600ಕ್ಕೆ ಒಟ್ಟಾರೆಯಾಗಿ 198 ಅಂಕಗಳನ್ನು (ಶೇ. 33) ಪಡೆಯಬೇಕು.
- ವಿಷಯವಾರು ಕಡ್ಡಾಯ: ಪ್ರತಿ ವಿಷಯದಲ್ಲಿ ಲಿಖಿತ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನ/ಪ್ರಾಯೋಗಿಕ ಪರೀಕ್ಷೆ ಸೇರಿ ಕನಿಷ್ಠ ಶೇ. 30ಕ್ಕಿಂತ ಹೆಚ್ಚು ಅಂಕ ಪಡೆಯಬೇಕು.
- ಲಿಖಿತ ಪರೀಕ್ಷೆಯಲ್ಲಿ ಕಡ್ಡಾಯ:
- ಪ್ರಾಯೋಗಿಕ/ಆಂತರಿಕ ಮೌಲ್ಯಮಾಪನ ಇಲ್ಲದ ವಿಷಯಗಳು: 80 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕನಿಷ್ಠ 24 ಅಂಕ (ಶೇ. 30) ಕಡ್ಡಾಯ.
- ಪ್ರಾಯೋಗಿಕ/ಆಂತರಿಕ ಮೌಲ್ಯಮಾಪನ ಇರುವ ವಿಷಯಗಳು: 70 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕನಿಷ್ಠ 21 ಅಂಕ (ಶೇ. 30) ಕಡ್ಡಾಯ.
- ಪ್ರಾಯೋಗಿಕ ಅಂಕ: ಪ್ರಾಯೋಗಿಕ ಪರೀಕ್ಷೆಗೆ ಈ ಮೊದಲು ಇದ್ದ 30 ಅಂಕವನ್ನು 20 ಅಂಕಕ್ಕೆ ಇಳಿಸಲಾಗಿದೆ.
ಕನ್ನಡ ಅಂಕದ ಬಗ್ಗೆ ಸಿಎಂ ತೀರ್ಮಾನ
ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಭಾಷೆ ಕನ್ನಡದ ಪರೀಕ್ಷೆ ಪ್ರಸ್ತುತ 125 ಅಂಕಗಳಿಗೆ ನಡೆಯುತ್ತಿದೆ. ಇದನ್ನು ಗರಿಷ್ಠ 100 ಅಂಕಗಳಿಗೆ ಇಳಿಸುವ ಬಗ್ಗೆ ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಗೆದುಕೊಳ್ಳಲಿದ್ದಾರೆ. ಶೀಘ್ರವೇ ಈ ಬಗ್ಗೆ ತೀರ್ಮಾನ ಪ್ರಕಟಗೊಳ್ಳುವ ಸಾಧ್ಯತೆಯಿದೆ.