
ಬೆಂಗಳೂರು: 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ಪರೀಕ್ಷಾ ಸಂಬಂಧಿತ ಗೊಂದಲಗಳನ್ನು ಪರಿಹರಿಸಲು ಶಿಕ್ಷಣ ಇಲಾಖೆಯು ವಿಶೇಷ ಸಹಾಯವಾಣಿ ಕೇಂದ್ರಗಳನ್ನು ತೆರೆದಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಈಗಾಗಲೇ 2026ರ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಫೆಬ್ರವರಿ 28 ರಿಂದ ದ್ವಿತೀಯ ಪಿಯುಸಿ ಹಾಗೂ ಮಾರ್ಚ್ 18 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಲಿವೆ. ಈ ಮಹತ್ವದ ಪರೀಕ್ಷೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಕಂಡುಬರುವ ಪರೀಕ್ಷಾ ಭಯ (Exam Phobia), ಗೊಂದಲ ಹಾಗೂ ಆತಂಕಗಳನ್ನು ದೂರವಾಗಿಸಲು ಇಲಾಖೆಯು080-23310076 ಮತ್ತು080-23310075 ಎಂಬ ಎರಡು ಸಮರ್ಪಿತ ಸಹಾಯವಾಣಿ ಸಂಖ್ಯೆಗಳನ್ನು ಜಾರಿಗೆ ತಂದಿದೆ.
ವಿದ್ಯಾರ್ಥಿಗಳು ಮಾತ್ರವಲ್ಲದೆ ಪೋಷಕರು ಕೂಡ ಈ ಸಂಖ್ಯೆಗಳಿಗೆ ಕರೆ ಮಾಡಿ ತಜ್ಞರಿಂದ ಮಾರ್ಗದರ್ಶನ ಪಡೆಯಬಹುದಾಗಿದೆ. ಪರೀಕ್ಷಾ ಕೊಠಡಿಯ ನಿಯಮಗಳು, ಹಾಲ್ ಟಿಕೆಟ್ ಸಮಸ್ಯೆಗಳು ಅಥವಾ ಓದಿನ ವಿಷಯದಲ್ಲಿ ಉಂಟಾಗುವ ಮಾನಸಿಕ ಒತ್ತಡದ ಬಗ್ಗೆ ಇಲ್ಲಿ ಸಮಾಲೋಚನೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಈ ಬಾರಿಯ ಪರೀಕ್ಷೆಗೆ ಒಟ್ಟು 16 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಪರೀಕ್ಷಾ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಶಿಕ್ಷಣ ಇಲಾಖೆಯು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.



































