
ಬೆಂಗಳೂರು: ರಾಜ್ಯದ ಹವಾಮಾನದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ಪೂರ್ವದ ಮಾರುತಗಳ ಪ್ರಭಾವದಿಂದಾಗಿ ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಮಳೆಯ ಮುನ್ಸೂಚನೆ ಲಭ್ಯವಾಗಿದೆ.
ಸೋಮವಾರದ ಅವಧಿಯಲ್ಲಿ ಮಲೆನಾಡು, ಕರಾವಳಿ ಮತ್ತು ಬಯಲು ಸೀಮೆಯ ಹಲವು ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣದೊಂದಿಗೆ ತುಂತುರು ಮಳೆ ಸುರಿಯುವ ನಿರೀಕ್ಷೆಯಿದೆ. ವಿಶೇಷವಾಗಿ ಬೆಂಗಳೂರು, ಮೈಸೂರು, ಕೋಲಾರ, ತುಮಕೂರು ಸೇರಿದಂತೆ ಒಟ್ಟು 13 ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ, ಜ. 13 ರಿಂದ ವಾರಪೂರ್ತಿ ರಾಜ್ಯಾದ್ಯಂತ ಮತ್ತೆ ಒಣಹವೆ ಶುರುವಾಗಲಿದೆ. ಇನ್ನು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಚಳಿ ಮುಂದುವರಿದಿದ್ದು, ಬೀದರ್‌ನಲ್ಲಿ ತಾಪಮಾನ 10.4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವ ಮೂಲಕ ರಾಜ್ಯದಲ್ಲೇ ಅತಿ ಶೀತಲ ಪ್ರದೇಶವಾಗಿ ಗುರುತಿಸಿಕೊಂಡಿದೆ. ರಾಜಧಾನಿಯಲ್ಲಿ ಸಹ ಸರಾಸರಿ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.



































