
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹತ್ವದ ರಾಜಕೀಯ ವಿದ್ಯಮಾನವೊಂದು ನಡೆದಿದೆ. ಕರ್ನಾಟಕದ ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೃಹತ್ ಯೋಜನೆಯೊಂದನ್ನು ಸಿದ್ಧಪಡಿಸಿದೆ. ದೆಹಲಿ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜ್ಯದ ಪ್ರಮುಖ ಬೇಡಿಕೆಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.
ಈ ಸಭೆಯಲ್ಲಿ ರಾಜ್ಯದ ಪೊಲೀಸ್ ಇಲಾಖೆಯ ಆಧುನೀಕರಣ, ಭದ್ರತಾ ಸೌಲಭ್ಯಗಳ ವಿಸ್ತರಣೆ ಹಾಗೂ ತಂತ್ರಜ್ಞಾನ ಆಧಾರಿತ ಕಾವಲು ವ್ಯವಸ್ಥೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರದ ವಿಶೇಷ ನೆರವನ್ನು ಕೋರಲಾಗಿದೆ. ಗೃಹ ಸಚಿವರಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಿರುವ ಡಿ.ಕೆ. ಶಿವಕುಮಾರ್ ಅವರು, ಪ್ರಸ್ತುತ ಸವಾಲುಗಳನ್ನು ಎದುರಿಸಲು ಕರ್ನಾಟಕ ಪೊಲೀಸರಿಗೆ ಅಗತ್ಯವಿರುವ ತಾಂತ್ರಿಕ ಹಾಗೂ ಆರ್ಥಿಕ ಬೆಂಬಲವನ್ನು ಶೀಘ್ರವಾಗಿ ಮಂಜೂರು ಮಾಡುವಂತೆ ಒತ್ತಾಯಿಸಿದ್ದಾರೆ.
ರಾಜ್ಯದ ಕಾರಾಗೃಹಗಳ ಸ್ಥಿತಿಗತಿ ಸುಧಾರಣೆ, ಹೊಸ ಬೆಟಾಲಿಯನ್‌ಗಳ ರಚನೆ ಮತ್ತು ಸೈಬರ್ ಅಪರಾಧ ತಡೆಗೆ ಪ್ರತ್ಯೇಕ ವಿಭಾಗದ ಸ್ಥಾಪನೆ ಸೇರಿದಂತೆ ಹಲವು ಪ್ರಮುಖ ವಿಷಯಗಳು ಈ ಚರ್ಚೆಯಲ್ಲಿ ಒಳಗೊಂಡಿದ್ದವು. ಕೇಂದ್ರ ಗೃಹ ಸಚಿವರ ಭೇಟಿಯ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ಗೌರವಾನ್ವಿತ ರಾಷ್ಟ್ರಪತಿಯವರನ್ನೂ ಭೇಟಿಯಾಗಲಿದ್ದಾರೆ.
ಕೇಂದ್ರಕ್ಕೆ ಸಲ್ಲಿಸಲಾದ ಪ್ರಮುಖ ಬೇಡಿಕೆಗಳು ಇಲ್ಲಿವೆ:
- ಹೆಚ್ಚುವರಿ ಬೆಟಾಲಿಯನ್ ಸ್ಥಾಪನೆ: ವಿಜಯನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ 2 ಹೊಸ ಇಂಡಿಯಾ ರಿಸರ್ವ್ ಬೆಟಾಲಿಯನ್ಸ್ (IRB) ರಚನೆಗಾಗಿ 243.87 ಕೋಟಿ ರೂ. ಅನುದಾನದ ಬೇಡಿಕೆ.
- ಪೊಲೀಸ್ ಆಧುನೀಕರಣ (ASUMP 2025-26): ರಾಜ್ಯದ 4 ಪ್ರಮುಖ ನಗರಗಳಲ್ಲಿ ಅತ್ಯಾಧುನಿಕ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಹಾಗೂ ತಂತ್ರಜ್ಞಾನ ಆಧಾರಿತ ಸಂವಹನ ಸಾಧನಗಳ ಅಳವಡಿಕೆಗೆ 280 ಕೋಟಿ ರೂ.ಗಳ ಪ್ರಸ್ತಾವನೆ.
- ಠಾಣೆಗಳಲ್ಲಿ ಸಿಸಿಟಿವಿ ಅಪ್‌ಗ್ರೇಡ್: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯದ ಪೊಲೀಸ್ ಠಾಣೆಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ದರ್ಜೆಗೆ ಏರಿಸಲು 278.26 ಕೋಟಿ ರೂ.ಗಳ ಆರ್ಥಿಕ ನೆರವು.
- ತರಬೇತಿ ಸಂಸ್ಥೆಗಳ ಅಭಿವೃದ್ಧಿ: ಬಿಪಿಆರ್‌ಆಂಡ್‌ಡಿ (BPR&D) ಮಾರ್ಗಸೂಚಿಯ ಅನ್ವಯ ಪೊಲೀಸ್ ತರಬೇತಿ ಕೇಂದ್ರಗಳ ಮೂಲಸೌಕರ್ಯ ಮೇಲ್ದರ್ಜೀಕರಣಕ್ಕೆ 258.53 ಕೋಟಿ ರೂ. ಮಂಜೂರಾತಿ.
- ಕಾರಾಗೃಹಗಳ ಸುರಕ್ಷತೆ: ಜೈಲುಗಳ ಭದ್ರತೆ ಹೆಚ್ಚಿಸಲು ಸಿಸಿಟಿವಿ ಹಾಗೂ ವಾಕಿ-ಟಾಕಿ ಖರೀದಿಗಾಗಿ 2025-26ರ ಸಾಲಿಗೆ 20 ಕೋಟಿ ರೂ. ಬಿಡುಗಡೆ.
- ಸಿಎಸ್ಆರ್ ನಿಧಿ ಬಳಕೆ: ಕಂಪನಿಗಳ ಕಾಯ್ದೆ 2013ರ ಶೆಡ್ಯೂಲ್ 7ರ ಅಡಿಯಲ್ಲಿ ಪೊಲೀಸ್ ಇಲಾಖೆಯ ಚಟುವಟಿಕೆಗಳಿಗೂ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಹಣ ಬಳಸಲು ಅನುಮತಿ.
- ಮೋಟಾರು ವಾಹನ ನಿಯಮ ವಿಸ್ತರಣೆ: ಕೇಂದ್ರ ಮೋಟಾರು ವಾಹನಗಳ ನಿಯಮ 1989ರ ನಿಯಮ 52-A ಅನುಷ್ಠಾನದ ಗಡುವನ್ನು ವಿಸ್ತರಿಸಲು ಸಂಬಂಧಪಟ್ಟ ಸಚಿವಾಲಯದೊಂದಿಗೆ ಚರ್ಚಿಸುವಂತೆ ಮನವಿ.
ರಾಷ್ಟ್ರಪತಿಗಳ ಅತ್ಯುನ್ನತ ಗೌರವಕ್ಕೆ ಮನವಿ: ಕರ್ನಾಟಕ ಪೊಲೀಸ್ ಇಲಾಖೆಯ ಸುದೀರ್ಘ ಮತ್ತು ದಕ್ಷ ಸೇವೆಯನ್ನು ಪರಿಗಣಿಸಿ ‘ಪ್ರೆಸಿಡೆಂಟ್ಸ್ ಕಲರ್’ ಪ್ರಶಸ್ತಿ ನೀಡುವಂತೆ 8-5-2024 ರಂದೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ ಕೇಂದ್ರದ ಪರಿಶೀಲನೆಯಲ್ಲಿರುವ ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ರಾಜ್ಯ ಪೊಲೀಸ್ ಬಲಕ್ಕೆ ಈ ಪ್ರತಿಷ್ಠಿತ ಗೌರವ ಒದಗಿಸಿಕೊಡಬೇಕೆಂದು ಗೃಹ ಸಚಿವರಿಗೆ ವಿಶೇಷವಾಗಿ ವಿನಂತಿಸಲಾಗಿದೆ. ಇದರೊಂದಿಗೆ ಸೈಬರ್ ವಂಚನೆಗಳನ್ನು ತಡೆಗಟ್ಟಲು ‘ಕರ್ನಾಟಕ ಸೈಬರ್ ಕ್ರೈಮ್ ಕಂಟ್ರೋಲ್ ಅಂಡ್ ಕೋಆರ್ಡಿನೇಷನ್ ಯುನಿಟ್’ (K4C) ಸ್ಥಾಪನೆಗೂ ಕೇಂದ್ರದ ಸಹಕಾರ ಕೋರಲಾಗಿದೆ.
































