
ಕೋಟ: ನಂಬಿದ ಭಕ್ತರ ಪಾಲಿಗೆ ಅಭಯ ನೀಡುವ ತುಳುನಾಡಿನ ದೈವ ಕೊರಗಜ್ಜ, ಮತ್ತೊಮ್ಮೆ ತನ್ನ ಪವಾಡವನ್ನು ಪ್ರದರ್ಶಿಸಿದ್ದಾರೆ. 15 ವರ್ಷಗಳ ಹಿಂದೆ ಕಾಣೆಯಾಗಿದ್ದ 60 ಗ್ರಾಂ ತೂಕದ ಚಿನ್ನದ ಬ್ರೇಸ್‌ಲೆಟ್ ಮರಳಿ ಸಿಕ್ಕಿದ್ದು, ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಒಂದು ಕುಟುಂಬದಲ್ಲಿ ಸಂತಸದ ಅಲೆ ತಂದಿದೆ. ಈ ಘಟನೆ, ಸಾಸ್ತಾನದ ಕಳಿಬೈಲು ಮೂಡಹಡುವಿನಲ್ಲಿರುವ ಕೊರಗಜ್ಜನ ಶಕ್ತಿಗೆ ಮತ್ತೊಂದು ನಿದರ್ಶನವಾಗಿದೆ.
ಸುಮಾರು 15 ವರ್ಷಗಳ ಹಿಂದೆ, ಸಾಲಿಗ್ರಾಮದ ಒಂದು ಕುಟುಂಬದ ಯಜಮಾನರು ತಮ್ಮ ಬಂಗಾರದ ಬ್ರೇಸ್‌ಲೆಟ್ ಕಳೆದುಕೊಂಡು ತೀವ್ರ ನಿರಾಶರಾಗಿದ್ದರು. ಆಗ ಸುಮಾರು 6 ಲಕ್ಷ ರೂ. ಮೌಲ್ಯದ ಈ ಆಭರಣವನ್ನು ಎಲ್ಲೆಡೆ ಹುಡುಕಿದರೂ ಪ್ರಯೋಜನವಾಗಲಿಲ್ಲ. ಆನಂತರ, ಆ ಕುಟುಂಬ ಕಳೆದುಹೋದ ಚಿನ್ನದ ವಿಷಯವನ್ನು ಮರೆತು ಮುಂದುವರೆದಿತ್ತು.
ಕಳೆದ ಒಂದು ವರ್ಷದ ಹಿಂದೆ, ಈ ಕುಟುಂಬದ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರಿಗೆ ಯಜಮಾನರು ಈ ಕಳೆದುಹೋದ ಚಿನ್ನದ ಬಗ್ಗೆ ಹೇಳಿದ್ದರು. ಆಕೆ, ಕಳಿಬೈಲು ಕೊರಗಜ್ಜನ ಪರಮ ಭಕ್ತೆಯಾಗಿದ್ದಳು. ಈ ವಿಷಯ ಕೇಳಿದ ತಕ್ಷಣ ಆಕೆ ಕೊರಗಜ್ಜನ ದರ್ಶನಕ್ಕೆ ಹೋದಳು. ಅಲ್ಲಿ, ಆಕೆಯು ಕಳೆದುಹೋದ ಚಿನ್ನ ಮರಳಿ ಸಿಗುವಂತೆ ಬೇಡಿಕೊಂಡಿದ್ದಳು ಮತ್ತು ಸಿಕ್ಕರೆ ವಿಶೇಷ ಪೂಜೆ ಸಲ್ಲಿಸುವುದಾಗಿ ಹರಕೆ ಹೊತ್ತಿದ್ದಳು.
ಭಕ್ತಳ ಬೇಡಿಕೆಯನ್ನು ಆಲಿಸಿದ ಕೊರಗಜ್ಜ, ಪವಾಡದ ರೀತಿಯಲ್ಲಿ ಚಿನ್ನವನ್ನು ಮರಳಿ ತಲುಪಿಸಿದ್ದಾನೆ. ಮನೆಯ ಯಜಮಾನರ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ, ಅದೇ ಕೆಲಸದಾಕೆಗೆ 60 ಗ್ರಾಂ ಚಿನ್ನದ ಬ್ರೇಸ್‌ಲೆಟ್ ಮಣ್ಣಿನಲ್ಲಿ ಸಿಕ್ಕಿತು. ಈ ದೈವದ ಮಹಿಮೆಯನ್ನು ಕಂಡು ಆಕೆ ಭಾವುಕಳಾಗಿದ್ದಳು.
ತಕ್ಷಣ ಆಕೆ, ತನಗೆ ದೊರೆತ ಚಿನ್ನವನ್ನು ಪ್ರಾಮಾಣಿಕವಾಗಿ ಯಜಮಾನರಿಗೆ ಹಿಂದಿರುಗಿಸಿದರು. ಕೊರಗಜ್ಜನ ಕೃಪೆಗೆ ಪಾತ್ರರಾದ ಆ ಕುಟುಂಬವು ಕೂಡ ಆಕೆಯನ್ನು ಜೊತೆಗೂಡಿಸಿಕೊಂಡು ಕಳಿಬೈಲು ಸನ್ನಿಧಾನಕ್ಕೆ ಬಂದು, ಹರಕೆ ತೀರಿಸಿದರು. ಈ ಘಟನೆಯು ಸ್ಥಳೀಯವಾಗಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ಕೊರಗಜ್ಜನ ಮೇಲಿನ ಭಕ್ತಿ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.