
ಬೆಂಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ತಲೆದೋರಿರುವ ಯುದ್ಧದ ಭೀತಿಯು ಇದೀಗ ರಾಜ್ಯದ ಸಾಮಾನ್ಯ ಜನರ ಅಡುಗೆಮನೆ ಹಾಗೂ ಹೋಟೆಲ್ ಉದ್ಯಮದ ಮೇಲೆ ನೇರ ಪರಿಣಾಮ ಬೀರಿದೆ. ಅಂತರಾಷ್ಟ್ರೀಯ ಮಟ್ಟದ ಈ ಅನಿಶ್ಚಿತತೆಯಿಂದಾಗಿ ದೇಶಾದ್ಯಂತ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 60 ರೂಪಾಯಿ ಏರಿಕೆಯಾಗಿದ್ದು, ಬೆಲೆ ಏರಿಕೆಯ ಬೆನ್ನಲ್ಲೇ ಪೂರೈಕೆಯಲ್ಲೂ ಭಾರೀ ವ್ಯತ್ಯಯ ಉಂಟಾಗಿದೆ.
ಗೃಹಬಳಕೆ ಗ್ರಾಹಕರಲ್ಲಿ ಮನೆ ಮಾಡಿದ ಆತಂಕ
ಸಾಮಾನ್ಯವಾಗಿ ಸಿಲಿಂಡರ್ ಬುಕಿಂಗ್ ಮಾಡಿದ 48 ಗಂಟೆಗಳ ಒಳಗೆ ಮನೆಬಾಗಿಲಿಗೆ ಬರುತ್ತಿದ್ದ 14.2 ಕೆಜಿ ಮರುಪೂರಣ ಸಿಲಿಂಡರ್‌ಗಳು ಈಗ ವಾರ ಕಳೆದರೂ ಸಿಗುತ್ತಿಲ್ಲ. ಕೊಲ್ಲಿ ರಾಷ್ಟ್ರಗಳ ಸಂಘರ್ಷದಿಂದ ಮುಂದೆ ಗ್ಯಾಸ್ ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳಬಹುದು ಎಂಬ ದಿಗಿಲಿನಿಂದ ಗ್ರಾಹಕರು ಮುಗಿಬಿದ್ದು ಬುಕಿಂಗ್ ಮಾಡುತ್ತಿರುವುದು ಈ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ. ರಾಜ್ಯದ 600ಕ್ಕೂ ಹೆಚ್ಚು ಗ್ಯಾಸ್ ಏಜೆನ್ಸಿಗಳಲ್ಲಿ ಈಗ ಸಿಲಿಂಡರ್‌ಗಳ ದಾಸ್ತಾನು ಖಾಲಿಯಾಗುತ್ತಿದ್ದು, ಹೊಸ ಗ್ಯಾಸ್ ಸಂಪರ್ಕ ಬಯಸುವವರಿಗೆ “ಒಂದು ತಿಂಗಳ ನಂತರ ಬನ್ನಿ” ಎಂಬ ಹತಾಶೆಯ ಉತ್ತರ ಸಿಗುತ್ತಿದೆ.
ಸ್ತಬ್ಧವಾಗಲಿವೆಯೇ ಹೋಟೆಲ್ ಅಡುಗೆ ಮನೆಗಳು?
ಇತ್ತ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆ ಬಹುತೇಕ ಸ್ಥಗಿತಗೊಂಡಿರುವುದು ಹೋಟೆಲ್ ಮಾಲೀಕರನ್ನು ಕಂಗೆಡಿಸಿದೆ. ಸಿಲಿಂಡರ್ ಕೊರತೆಯಿಂದಾಗಿ ಅಡುಗೆ ತಯಾರಿಸುವುದು ಅಸಾಧ್ಯವಾಗಿದ್ದು, ಮಾರ್ಚ್ 10ರಿಂದ ಹೋಟೆಲ್‌ಗಳನ್ನು ಅನಿವಾರ್ಯವಾಗಿ ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೋಟೆಲ್ ಮಾಲೀಕರ ಸಂಘ ಎಚ್ಚರಿಸಿದೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಹೋಟೆಲ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಕೃಷ್ಣರಾಜ್ ಅವರು, “ಇದು ನಮ್ಮ ಸ್ವಯಂಕೃತ ನಿರ್ಧಾರವಲ್ಲ, ಬದಲಾಗಿ ಸರ್ಕಾರದ ನೀತಿಗಳಿಂದ ನಮ್ಮ ಮೇಲೆ ಹೇರಲ್ಪಟ್ಟಿರುವ ಒತ್ತಡ. ತೈಲ ಕಂಪನಿಗಳು 70 ದಿನಗಳ ಕಾಲ ಯಾವುದೇ ಪೂರೈಕೆ ವ್ಯತ್ಯಯವಾಗುವುದಿಲ್ಲ ಎಂದು ಭರವಸೆ ನೀಡಿದ್ದವು. ಆದರೆ ಈಗ ಏಕಾಏಕಿ ಪೂರೈಕೆ ನಿಲ್ಲಿಸಿರುವುದು ನಮಗೆ ಆಘಾತ ತಂದಿದೆ. ನಮ್ಮಲ್ಲಿ ಕೇವಲ ಮಾರ್ಚ್ 10ರ ಮಧ್ಯಾಹ್ನದವರೆಗೆ ಸಾಕಾಗುವಷ್ಟು ಮಾತ್ರ ದಾಸ್ತಾನು ಇದೆ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಹಸ್ತಕ್ಷೇಪಕ್ಕೆ ಆಗ್ರಹ
ಮಧ್ಯಪ್ರಾಚ್ಯದ ಬಿಕ್ಕಟ್ಟನ್ನು ಮುಂದಿಟ್ಟುಕೊಂಡು ಕೃತಕ ಅಭಾವ ಸೃಷ್ಟಿಸಲಾಗುತ್ತಿದೆಯೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಕೂಡಲೇ ಕೇಂದ್ರ ಸಚಿವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ಹೋಟೆಲ್ ಉದ್ಯಮ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅಡುಗೆ ಅನಿಲದ ಸರಬರಾಜನ್ನು ಸುಗಮಗೊಳಿಸಬೇಕು ಎಂದು ಸಂಘಟನೆಯು ಆಗ್ರಹಿಸಿದೆ. ಒಂದು ವೇಳೆ ಪೂರೈಕೆ ಪುನರಾರಂಭಗೊಳ್ಳದಿದ್ದರೆ ರಾಜ್ಯದ ಸಾವಿರಾರು ಹೋಟೆಲ್‌ಗಳು ಬೀಗ ಹಾಕಬೇಕಾದ ಸ್ಥಿತಿ ಎದುರಾಗಲಿದೆ.



































