
ಬೆಂಗಳೂರು : ವಿವಾಹದ ಸುಳ್ಳು ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿದ ನಂತರ ವಂಚನೆ ಎಸಗಿದ ಪ್ರಕರಣಗಳಲ್ಲಿ ಆರೋಪಿಗಳನ್ನು ಕಡ್ಡಾಯವಾಗಿ ಬಂಧಿಸಿ ಜೈಲಿಗೆ ಕಳುಹಿಸುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಇಂತಹ ಪ್ರಕರಣಗಳಲ್ಲಿ ಪೊಲೀಸರು ಅನಗತ್ಯವಾಗಿ ವ್ಯಕ್ತಿಗಳನ್ನು ಬಂಧಿಸುತ್ತಿರುವ ಕ್ರಮದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ನ್ಯಾಯಾಲಯ, ಈ ಪ್ರವೃತ್ತಿಯನ್ನು ತಡೆಗಟ್ಟಲು ತಕ್ಷಣದ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಎಚ್.ಜಿ. ಗಂಗ ಎಂಬುವವರು ತಮ್ಮ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಎಫ್‌ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ದೂರುದಾರರು ಘಟನೆ ನಡೆದ 1 ವರ್ಷ 3 ತಿಂಗಳ ನಂತರ ದೂರು ನೀಡಿರುವುದು ಮತ್ತು ಅಧೀನ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದನ್ನು ಗಮನಿಸಿದ ಪೀಠವು, ತನಿಖಾ ಸಂಸ್ಥೆಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದೆ. ಇಂತಹ ಪ್ರಕರಣಗಳಲ್ಲಿ ಬಂಧನ ಅನಿವಾರ್ಯವಲ್ಲ ಎಂದು ನ್ಯಾಯಾಲಯಗಳು ಪದೇ ಪದೇ ಹೇಳುತ್ತಿದ್ದರೂ ಪೊಲೀಸರು ಬಂಧನ ಪ್ರಕ್ರಿಯೆ ಮುಂದುವರಿಸುತ್ತಿರುವುದು ಸರಿಯಲ್ಲ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.



































