
ಬೆಂಗಳೂರು: ಯುವ ಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ರಾಜ್ಯಾದ್ಯಂತ ಶಾಲಾ ಮಕ್ಕಳಲ್ಲಿ ಹೃದಯ ಆರೋಗ್ಯವನ್ನು ಪರೀಕ್ಷಿಸಲು ವಿಶೇಷ ಯೋಜನೆಯನ್ನು ರೂಪಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸಚಿವರು, ಪ್ರತಿ ವರ್ಷ ಶಾಲಾ ಹಂತದಲ್ಲೇ ಮಕ್ಕಳ ಹೃದಯದ ಆರೋಗ್ಯವನ್ನು ಪರಿಶೀಲಿಸುವ ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ ಕಾಲೇಜು ಮಟ್ಟಕ್ಕೂ ವಿಸ್ತರಿಸಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರವು ಹೃದಯಾಘಾತ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿಯೂ ಹೃದಯಾಘಾತಕ್ಕೆ ಕಾರಣಗಳು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ. ಆಹಾರ ಪದ್ಧತಿ ಬದಲಾವಣೆ, ಬದಲಾದ ಜೀವನಶೈಲಿ, ವಂಶಪಾರಂಪರಿಕ ಕಾರಣಗಳು ಸೇರಿದಂತೆ ಹಲವು ಅಂಶಗಳು ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಸಚಿವರು ವಿವರಿಸಿದರು.
ಇದಲ್ಲದೆ, ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿರುವ ಬಗ್ಗೆ ಖಚಿತ ಮಾಹಿತಿ ಪಡೆಯಲು, ಮೃತಪಟ್ಟ ಕುಟುಂಬದವರ ಮನವೊಲಿಸಿ ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾಸನ ಜಿಲ್ಲೆಯಲ್ಲಿ ನಡೆದ ಹೃದಯಾಘಾತ ಪ್ರಕರಣಗಳ ಬಗ್ಗೆ ತನಿಖೆ ಮತ್ತು ಮಾಹಿತಿ ಪಡೆಯಲು ಈಗಾಗಲೇ ಹೃದ್ರೋಗ ತಜ್ಞರ ತಂಡವನ್ನು ರಚಿಸಲಾಗಿದ್ದು, ವರದಿ ಬಂದ ನಂತರ ಸರ್ಕಾರ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಸಚಿವ ರಾಜಣ್ಣ ಸ್ಪಷ್ಟಪಡಿಸಿದರು.