
ಬಾಗಲಕೋಟೆ: ಸರಕಾರಿ ಸ್ಥಳಗಳು ಮತ್ತು ಮುಜುರಾಯಿ ದೇವಸ್ಥಾನಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಎಲ್ಲಾ ಚಟುವಟಿಕೆಗಳನ್ನು ರದ್ದು ಮಾಡುವಂತೆ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿದ್ದ ಪತ್ರದ ಬೆನ್ನಲ್ಲೇ, ಸಿಎಂ ಅವರು ಮಹತ್ವದ ಸೂಚನೆ ನೀಡಿದ್ದಾರೆ.
ಮುಖ್ಯ ಕಾರ್ಯದರ್ಶಿ ಶಾಲಿ ರಜನೀಶ್ ಅವರಿಗೆ ಪತ್ರವನ್ನು ಕಳುಹಿಸಿ ಕೂಡಲೇ ಅಗತ್ಯ ಕ್ರಮ ವಹಿಸಿ ಎಂದು ಸಿದ್ದರಾಮಯ್ಯ ಸೂಚಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. “RSS ಚಟುವಟಿಕೆ ನಿಷೇಧ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ (CS) ಅವರಿಗೆ ಸೂಚಿಸಿದ್ದೇನೆ,” ಎಂದು ಅವರು ತಿಳಿಸಿದರು.
ಅಲ್ಲದೆ, “ತಮಿಳುನಾಡಿನಲ್ಲಿ ಯಾವ ರೀತಿ ಕ್ರಮ ಕೈಗೊಂಡಿದ್ದಾರೋ ಅದೇ ರೀತಿ ಕ್ರಮ ಕೈಗೊಳ್ಳಿ ಅಂತಾ ಸಿಎಸ್ಗೆ ಸೂಚಿಸಿದ್ದೇನೆ,” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಮುಖ್ಯಮಂತ್ರಿಗಳ ಈ ಸೂಚನೆಯಿಂದಾಗಿ ಇನ್ನು ಮುಂದಿನ ದಿನಗಳಲ್ಲಿ ಸರಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಕಾರ್ಯಚಟುವಟಿಕೆಗಳಿಗೆ ತಡೆ ಬೀಳುವುದು ಖಚಿತ ಎನ್ನಲಾಗಿದೆ.



































