
ಮೈಸೂರು: ನಾಡಹಬ್ಬ ದಸರಾವನ್ನು ಉದ್ಘಾಟಿಸಲು ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದನ್ನು ವಿರೋಧಿಸಿ, ಮಾಜಿ ಸಂಸದ ಪ್ರತಾಪ ಸಿಂಹ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ಕುರಿತು ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಶನಿವಾರ ಆಲಮಟ್ಟಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವಿಷಯವನ್ನು ರಾಜಕೀಯ ಮತ್ತು ಕಾನೂನು ಮಾರ್ಗಗಳ ಮೂಲಕ ಎದುರಿಸುವುದಾಗಿ ತಿಳಿಸಿದರು.
ಬಾನು ಮುಷ್ತಾಕ್ ಆಯ್ಕೆ ಕುರಿತ ವಿವಾದ ನ್ಯಾಯಾಲಯದ ಮೆಟ್ಟಿಲೇರಿರುವುದು ತಮಗೆ ಸಂತೋಷ ತಂದಿದ್ದು, ಈ ವಿವಾದದ ಕುರಿತು ನ್ಯಾಯಾಲಯದಲ್ಲಿಯೇ ಇತ್ಯರ್ಥವಾಗಲಿ ಎಂದು ಸಿಎಂ ಹೇಳಿದರು. ಹಿಂದಿನ ಘಟನೆಗಳನ್ನು ಉಲ್ಲೇಖಿಸಿ, ಪ್ರತಾಪ ಸಿಂಹ ಅವರು ಸಂಸದರಾಗಿದ್ದಾಗ, ಖ್ಯಾತ ಸಾಹಿತಿ ನಿಸಾರ್ ಅಹಮದ್ ದಸರಾ ಉದ್ಘಾಟಿಸಿದಾಗ ಯಾಕೆ ನ್ಯಾಯಾಲಯಕ್ಕೆ ಹೋಗಲಿಲ್ಲ ಎಂದು ಪ್ರಶ್ನಿಸಿದರು.
ಇದೇ ರೀತಿ, ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರು ದಸರಾ ಆಚರಣೆಗಳನ್ನು ಬೆಂಬಲಿಸಿದಾಗ, ಮತ್ತು ಮಿರ್ಜಾ ಇಸ್ಮಾಯಿಲ್ ಅವರು ಮೆರವಣಿಗೆಗಳಲ್ಲಿ ಭಾಗವಹಿಸಿದಾಗ ಯಾಕೆ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ ಎಂದು ಮುಖ್ಯಮಂತ್ರಿಗಳು ಕೇಳಿದರು. ಪ್ರಸ್ತುತ ಬಾನು ಮುಷ್ತಾಕ್ ಅವರ ವಿಷಯದಲ್ಲಿ ಮಾತ್ರ ರಾಜಕೀಯ ದುರುದ್ದೇಶದಿಂದ ವಿರೋಧ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಬಾನು ಮುಷ್ತಾಕ್ ಅವರು ಕನ್ನಡಾಂಬೆಯ ಕುರಿತು ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ ಎಂದು ಪ್ರತಾಪ ಸಿಂಹ ಆರೋಪಿಸಿರುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು. ಬಾನು ಮುಷ್ತಾಕ್ ಒಬ್ಬ ಕನ್ನಡ ಸಾಹಿತಿಯಾಗಿರುವುದರಿಂದ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಲಾಗಿದೆ ಎಂದು ಅವರು ಸಮರ್ಥಿಸಿಕೊಂಡರು.