
ಕಾರ್ಕಳ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೂತನ ಇ-ಸ್ವತ್ತು 2.0 (E-Swathu 2.0) ತಂತ್ರಾಂಶದಲ್ಲಿನ ತಾಂತ್ರಿಕ ದೋಷಗಳಿಂದಾಗಿ ಗ್ರಾಮೀಣ ಭಾಗದ ಜನಸಾಮಾನ್ಯರು ಕಷ್ಟಪಡುತ್ತಿದ್ದು, ಈ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ಯರ್ಲಪಾಡಿ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಪತ್ರ ಬರೆಯಲಾಗಿದೆ.
ಸಮಸ್ಯೆಯ ಹಿನ್ನೆಲೆ:
ಈ ಹಿಂದೆ ಗ್ರಾಮ ಪಂಚಾಯತ್‌ಗಳಲ್ಲಿ ನಮೂನೆ 9/11 ನೀಡಲಾಗುತ್ತಿತ್ತು. ಆದರೆ ಈಗ ಜಾರಿಯಾಗಿರುವ ಇ-ಸ್ವತ್ತು 2.0 ತಂತ್ರಾಂಶದಲ್ಲಿ ನಮೂನೆ 11A ಮತ್ತು 11B ಸೃಜನೆಯಾಗುತ್ತಿಲ್ಲ. ಹೊಸ ತಂತ್ರಾಂಶ ಜಾರಿಯಾಗಿ 2 ತಿಂಗಳು ಕಳೆದರೂ ತಾಂತ್ರಿಕ ಸಮಸ್ಯೆಗಳು ಬಗೆಹರಿದಿಲ್ಲ. ಇದರಿಂದಾಗಿ ಹೊಸ ಮನೆ ನಿರ್ಮಾಣ, ಬ್ಯಾಂಕ್ ಸಾಲ ಪಡೆಯುವಿಕೆ ಮತ್ತು ಆಸ್ತಿ ನೋಂದಣಿ ಪ್ರಕ್ರಿಯೆಗಳು ಸಂಪೂರ್ಣ ಸ್ಥಗಿತಗೊಂಡಿವೆ.
ಗ್ರಾಮಸ್ಥರ ಆಕ್ರೋಶ – ಪಂಚಾಯತ್ ಇರಿಸುಮುರಿಸು:
“ಪಾರದರ್ಶಕತೆ ಮತ್ತು ಡಿಜಿಟಲೀಕರಣದ ಹೆಸರಿನಲ್ಲಿ ಹಳೆಯ ತಂತ್ರಾಂಶವನ್ನು ರದ್ದುಪಡಿಸಲಾಗಿದೆ. ಆದರೆ ಹೊಸ ತಂತ್ರಾಂಶವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸದೆ ಜಾರಿಗೊಳಿಸಿರುವುದು ಇಂದಿನ ಸಮಸ್ಯೆಗೆ ಮೂಲ ಕಾರಣ,” ಎಂದು ಪಂಚಾಯತ್ ಆಡಳಿತ ಅಸಮಾಧಾನ ವ್ಯಕ್ತಪಡಿಸಿದೆ. ಸಾರ್ವಜನಿಕರೊಂದಿಗೆ ನೇರ ಸಂಪರ್ಕದಲ್ಲಿರುವ ಪಂಚಾಯತ್ ಜನಪ್ರತಿನಿಧಿಗಳು ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಇರಿಸುಮುರಿಸು ಅನುಭವಿಸುವಂತಾಗಿದೆ.

ಪತ್ರದಲ್ಲಿನ ಪ್ರಮುಖ ಬೇಡಿಕೆಗಳು:
- ಹೊಸ ತಂತ್ರಾಂಶದಲ್ಲಿರುವ ತಾಂತ್ರಿಕ ದೋಷಗಳನ್ನು ಕೂಡಲೇ ಸರಿಪಡಿಸಿ ಸುಗಮಗೊಳಿಸಬೇಕು.
- ಅಥವಾ ಹೊಸ ತಂತ್ರಾಂಶ ಸರಿಪಡಿಸುವವರೆಗೆ ತಾತ್ಕಾಲಿಕವಾಗಿ ಹಳೆಯ ಇ-ಸ್ವತ್ತು ತಂತ್ರಾಂಶವನ್ನೇ ಮರುಜಾರಿಗೊಳಿಸಬೇಕು.
- ಗ್ರಾಮಸ್ಥರ ಬ್ಯಾಂಕ್ ಸಾಲ ಹಾಗೂ ಮನೆ ನಿರ್ಮಾಣಕ್ಕೆ ಆಗುತ್ತಿರುವ ತೊಂದರೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
ಯರ್ಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಈ ಬಗ್ಗೆ ಸಚಿವರಿಗೆ ಮನವಿ ಮಾಡಿದ್ದು, ಜನರ ಹಿತದೃಷ್ಟಿಯಿಂದ ಸರ್ಕಾರ ಶೀಘ್ರವೇ ಸ್ಪಂದಿಸಬೇಕೆಂದು ಆಗ್ರಹಿಸಿದ್ದಾರೆ.



































