
ಕಾರ್ಕಳ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಮಂಡಿಸಿದ ಬಜೆಟ್ ಕರಾವಳಿ ಭಾಗದ ನಿರೀಕ್ಷೆಗಳನ್ನು ಸಂಪೂರ್ಣವಾಗಿ ಹುಸಿಗೊಳಿಸಿದೆ ಎಂದು ಕಾರ್ಕಳದ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಆಯವ್ಯಯವು ಕೇವಲ ರಾಜಕೀಯ ಪ್ರೇರಿತವಾಗಿದ್ದು, ಸಾಮಾನ್ಯ ಜನರ ಬದುಕಿಗೆ ಯಾವುದೇ ಸಕಾರಾತ್ಮಕ ಬದಲಾವಣೆ ತರುವಲ್ಲಿ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಮುನಿಯಾಲು ಅವರ ಪ್ರಕಾರ, ಈ ಬಜೆಟ್ ದೇಶದ ಸಮಗ್ರ ಅಭಿವೃದ್ಧಿಗಿಂತ ಹೆಚ್ಚಾಗಿ ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲಿ ಪಕ್ಷದ ಅಸ್ತಿತ್ವವನ್ನು ಗಟ್ಟಿಗೊಳಿಸುವ ಚುನಾವಣಾ ತಂತ್ರದಂತೆ ಕಾಣುತ್ತಿದೆ. ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಜೆಪಿ ಸಂಸದರೇ ಇದ್ದರೂ, ಸ್ಥಳೀಯ ಜ್ವಲಂತ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಜನರ ಮೂಲಭೂತ ಅಗತ್ಯಗಳು ಮತ್ತು ಈ ಭಾಗದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಯಾವುದೇ ವಿಶೇಷ ಯೋಜನೆಗಳು ಬಜೆಟ್‌ನಲ್ಲಿ ಘೋಷಣೆಯಾಗಿಲ್ಲ. ಕರಾವಳಿ ಜನರ ಹಿತಾಸಕ್ತಿಯನ್ನು ಬಲಿಗೊಟ್ಟು ಕೇವಲ ಚುನಾವಣಾ ಲಾಭಕ್ಕಾಗಿ ಸಿದ್ಧಪಡಿಸಲಾದ ಈ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.



































