
ಕಾರ್ಕಳ : ಕಂದಾಯ ಇಲಾಖೆಯ ಮಹತ್ವಾಕಾಂಕ್ಷೆಯ ‘ಪೋಡಿ’ (ಪ್ಲಾಟಿಂಗ್) ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕು ರಾಜ್ಯಮಟ್ಟದಲ್ಲಿ ಗಮನ ಸೆಳೆದಿದೆ. ತಾಲೂಕಿನ ಈ ಸಾಧನೆಯನ್ನು ಗುರುತಿಸಿ ಕಂದಾಯ ಆಯುಕ್ತರಾದ ಮೀನಾ ನಾಗರಾಜ್ ಅವರು ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್. ಹಾಗೂ ಅವರ ತಂಡವನ್ನು ವಿಶೇಷವಾಗಿ ಅಭಿನಂದಿಸಿದ್ದಾರೆ.
ರಾಜ್ಯಮಟ್ಟದಲ್ಲಿ 6ನೇ ಸ್ಥಾನ: ಕಾರ್ಕಳದ ಐತಿಹಾಸಿಕ ಸಾಧನೆ
ಹಕ್ಕುಪತ್ರ ದರ್ಖಾಸ್ತು ಮಂಜೂರಾತಿ ಪ್ರಕ್ರಿಯೆಯಲ್ಲಿ ಗುಣಮಟ್ಟದ ಸೇವೆ ನೀಡುವ ಮೂಲಕ ಕಾರ್ಕಳ ತಾಲೂಕು ಇಡೀ ಕರ್ನಾಟಕ ರಾಜ್ಯಕ್ಕೆ 6ನೇ ಸ್ಥಾನ ಪಡೆದುಕೊಂಡಿದೆ. ಇನ್ನು ಜಿಲ್ಲಾವಾರು ಪರಿಗಣನೆಯಲ್ಲಿ ಉಡುಪಿ ಜಿಲ್ಲೆಯು ದ್ವಿತೀಯ ಸ್ಥಾನವನ್ನು ಅಲಂಕರಿಸಿದ್ದು, ಇದಕ್ಕೆ ಕಾರ್ಕಳದ ಕೊಡುಗೆ ಅಪಾರವಾಗಿದೆ.
ತಾಲೂಕಿನ ಒಟ್ಟು 2,251 ಸರ್ವೆ ನಂಬರ್‌ಗಳಿಗೆ ಸಂಬಂಧಿಸಿದಂತೆ, ಸುಮಾರು 7,578 ಖಾತೆದಾರರಿಂದ ಯಾವುದೇ ಭೌತಿಕ ದಾಖಲೆಗಳನ್ನು ಪಡೆಯದೇ ಕೇವಲ ಆಧುನಿಕ ತಂತ್ರಾಂಶದ ಮೂಲಕ ‘ಅನುಬಂಧ 1’ ಸಿದ್ಧಪಡಿಸಿರುವುದು ಈ ಯೋಜನೆಯ ದೊಡ್ಡ ಯಶಸ್ಸಾಗಿದೆ. ಈ ವಿನೂತನ ಕ್ರಮದಿಂದ ಸಾರ್ವಜನಿಕರಿಗೆ ಕಚೇರಿಗಳಿಗೆ ಅಲೆಯುವ ತೊಂದರೆ ತಪ್ಪಿದಂತಾಗಿದೆ.

ದಶಕಗಳ ಸಮಸ್ಯೆಗೆ ಮುಕ್ತಿ ನೀಡಿದ ತಹಶೀಲ್ದಾರ್ ಕಾರ್ಯವೈಖರಿ
ಸ್ವಾತಂತ್ರ್ಯ ಪೂರ್ವ ಹಾಗೂ ನಂತರ ವಿತರಿಸಲಾದ ಹಕ್ಕುಪತ್ರಗಳಿಗೆ ದಶಕಗಳಿಂದ ಪ್ಲಾಟಿಂಗ್ ಕಾರ್ಯ ನಡೆದಿರಲಿಲ್ಲ. ರೈತರು ಮತ್ತು ಸಾರ್ವಜನಿಕರ ಈ ದೀರ್ಘಕಾಲದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ತಹಶೀಲ್ದಾರ್ ಪ್ರದೀಪ್ ಆರ್. ಅವರು, ವಿಶೇಷ ಆಸಕ್ತಿ ವಹಿಸಿ ಕಡತಗಳನ್ನು ವಿಲೇವಾರಿ ಮಾಡಿದ್ದಾರೆ. ರಾಜ್ಯದ ಒಟ್ಟು 236 ತಾಲೂಕುಗಳ ಪೈಕಿ ಕೇವಲ 15 ತಾಲೂಕುಗಳು ಮಾತ್ರ ಈ ಮಟ್ಟದ ದಕ್ಷತೆ ಪ್ರದರ್ಶಿಸಿದ್ದು, ಅದರಲ್ಲಿ ಕಾರ್ಕಳ ಮುಂಚೂಣಿಯಲ್ಲಿದೆ.
ಕಂದಾಯ ಇಲಾಖೆಯ ಸಿಬ್ಬಂದಿಗಳ ಸಮನ್ವಯತೆ ಮತ್ತು ನಿರಂತರ ಪರಿಶ್ರಮದಿಂದಾಗಿ ಈ ಪ್ರಶಸ್ತಿ ಮತ್ತು ಗೌರವ ಲಭಿಸಿದೆ ಎಂದು ಕಂದಾಯ ಆಯುಕ್ತರು ಶ್ಲಾಘಿಸಿದ್ದಾರೆ.




































