
ನಂದಳಿಕೆ: ಹೊಸ ಮೊಬೈಲ್ ಫೋನ್ ಕೊಡಿಸದ ಕಾರಣಕ್ಕೆ ನೊಂದು ನಿಟ್ಟಿಯ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬರು ನವೆಂಬರ್ 13 ರಂದು ನೀರು ತುಂಬಿದ ಕಲ್ಲುಕೋರೆಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಂದಳಿಕೆಯಲ್ಲಿ ನಡೆದಿದೆ. ಮೃತರನ್ನು ನಂದಳಿಕೆಯ ನಿವಾಸಿ ಸುಮಂತ್ (16) ಎಂದು ಗುರುತಿಸಲಾಗಿದೆ.
ಹದಿಹರೆಯದ ಸುಮಂತ್ ಇತ್ತೀಚೆಗೆ ತಮ್ಮ ಮೊಬೈಲ್ ದುರಸ್ತಿಗೆ ನೀಡಿದ್ದರು. ಬಳಿಕ, ಹೊಸ ಮೊಬೈಲ್ ಫೋನ್ ಖರೀದಿಸಿಕೊಡುವಂತೆ ತಮ್ಮ ತಾಯಿ ಸುರೇಖಾ ಅವರಲ್ಲಿ ನಿರಂತರವಾಗಿ ಬೇಡಿಕೆ ಇಟ್ಟಿದ್ದರು. ತಾಯಿಯವರು ತಕ್ಷಣಕ್ಕೆ ಸಾಧ್ಯವಾಗದ ಕಾರಣ, ಕೆಲವೇ ತಿಂಗಳುಗಳಲ್ಲಿ ಹೊಸ ಫೋನ್ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ತಾಯಿಯ ಈ ಸಮಾಧಾನದ ಮಾತಿನಿಂದ ತೃಪ್ತನಾಗದ ಸುಮಂತ್ ತೀವ್ರವಾಗಿ ಮನನೊಂದು ಮನೆ ಬಿಟ್ಟು ತೆರಳಿದ್ದರು.
ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಿದ ನಂತರ, ಯುವಕ ನೀರು ತುಂಬಿದ್ದ ಕಲ್ಲುಕೋರೆಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ. ಮಗನ ಈ ಕಠಿಣ ನಿರ್ಧಾರದಿಂದ ತಾಯಿ ಸುರೇಖಾ ತೀವ್ರ ದುಃಖದಲ್ಲಿದ್ದಾರೆ.
ಕೆಲವು ವರ್ಷಗಳ ಹಿಂದೆ ಸುಮಂತ್‌ರ ತಂದೆ ಮಂಜುನಾಥ್ ಸಹ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಸುಮಂತ್ ತಾಯಿಯ ಏಕೈಕ ಮಗನಾಗಿದ್ದನು. ಮಗನ ಈ ದುರಂತ ಸಾವಿನಿಂದಾಗಿ ಆ ಕುಟುಂಬ ಶೋಕದ ಮಡುವಿನಲ್ಲಿ ಮುಳುಗಿದೆ. ಇಂತಹ ಸಣ್ಣ ಕಾರಣಕ್ಕೆ ಯುವಕ ಬಲಿಯಾಗಿರುವುದು ಸ್ಥಳೀಯರಲ್ಲಿ ದುಃಖ ಮತ್ತು ಆತಂಕವನ್ನು ಮೂಡಿಸಿದೆ.



































