
ಕಾರ್ಕಳ: ಪರೀಕ್ಷೆಯ ಸುಳಿಗಳಿಗೆ ಹೆದರದೆ, ಅಚಲವಾದ ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಶಿಕ್ಷಕ ಪ್ರಭಾಕರ ಕೊಂಡಳ್ಳಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸ್ಥಳೀಯ ಕೆ.ಎಮ್.ಇ.ಎಸ್ (KMES) ಶಿಕ್ಷಣ ಸಂಸ್ಥೆಯಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ‘ಪರೀಕ್ಷಾ ಪೂರ್ವ ಸಿದ್ಧತೆ ಮತ್ತು ಮಾರ್ಗದರ್ಶನ’ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕರ್ನಾಟಕ ಪರೀಕ್ಷಾ ಮಂಡಳಿಯು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 1 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡುವ ಮೂಲಕ ಕಲಿಕೆಯನ್ನು ಸರಳಗೊಳಿಸಿದೆ. ಕೇವಲ ಪಠ್ಯ ಪುಸ್ತಕಕ್ಕೆ ಸೀಮಿತವಾಗದೆ, ವಿವಿಧ ಮಾಧ್ಯಮಗಳ ಶೈಕ್ಷಣಿಕ ಮಾಹಿತಿ ಮತ್ತು ಶಿಕ್ಷಕರ ನಿಸ್ವಾರ್ಥ ಮಾರ್ಗದರ್ಶನವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಪರೀಕ್ಷೆಯು ಕೇವಲ ಅಂಕಗಳಿಕೆಯಲ್ಲ, ಅದು ನಿಮ್ಮ ಜ್ಞಾನದ ಪ್ರತಿಬಿಂಬವಾಗಲಿ. ಶ್ರದ್ಧೆಯಿಂದ ಅಭ್ಯಾಸ ಮಾಡಿ ಸಂಸ್ಥೆ ಹಾಗೂ ಪೋಷಕರಿಗೆ ಹೆಮ್ಮೆ ತರುವಂತೆ ಸಾಧನೆ ಮಾಡಿ ಎಂದು ಹಾರೈಸಿದರು.
ಕಾರ್ಯಕ್ರಮದುದ್ದಕ್ಕೂ ಪ್ರಭಾಕರ ಕೊಂಡಳ್ಳಿ ಅವರು ಆಕರ್ಷಕ ಕಥೆಗಳ ಮೂಲಕ ಕಠಿಣ ವಿಷಯಗಳನ್ನು ಸರಳವಾಗಿ ವಿವರಿಸುತ್ತಾ ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಕೆ. ಬಾಲಕೃಷ್ಣ ರಾವ್ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಲೊಲಿಟ ಡಿ’ಸಿಲ್ವ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕಿ ಶೃತಿ ಅವರು ಅತಿಥಿಗಳನ್ನು ಗೌರವಿಸಿದರು.




































