
ಕಾರ್ಕಳ: ಅಂತರಾಷ್ಟ್ರೀಯ ಸೌಹಾರ್ದತೆ ಮತ್ತು ಸೇವಾ ಮನೋಭಾವನೆಯನ್ನು ಪಸರಿಸುವ ಉದ್ದೇಶದೊಂದಿಗೆ ಆಯೋಜಿಸಲಾಗಿದ್ದ ‘ರೈಡ್ ಫಾರ್ ರೋಟರಿ’ ಬೈಕ್ ರ್ಯಾಲಿಯ ತಂಡಕ್ಕೆ ಕಾರ್ಕಳದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ವಿಶ್ವದ 10 ವಿವಿಧ ರಾಷ್ಟ್ರಗಳಿಂದ ಆಗಮಿಸಿದ ರೋಟರಿ ಸದಸ್ಯರಿಗೆ ಕಾರ್ಕಳ ರೋಟರಿ ಕ್ಲಬ್ ವತಿಯಿಂದ ಆತ್ಮೀಯ ಆತಿಥ್ಯ ನೀಡುವ ಮೂಲಕ ಸಾಂಸ್ಕೃತಿಕ ವಿನಿಮಯಕ್ಕೆ ಸಾಕ್ಷಿಯಾಯಿತು.
ಕಾರ್ಕಳದ ಶೀತಲ್ ಗಾರ್ಡನ್ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮವು ರೋಟರಿ ಕ್ಲಬ್ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ರೊಮೇನಿಯಾ, ಆಸ್ಟ್ರಿಯಾ, ಜರ್ಮನಿ, ಕೆನಡಾ, ಸ್ವೀಡನ್, ನಾರ್ವೆ, ಬೆಲ್ಜಿಯಂ, ಪೋಲಂಡ್, ನೆದರ್‌ಲ್ಯಾಂಡ್ ಹಾಗೂ ಡೆನ್ಮಾರ್ಕ್ ದೇಶಗಳ 30ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ರೋಟರಿ ಡಿಸ್ಟ್ರಿಕ್ಟ್ 3180ರ ಸದಸ್ಯರೊಂದಿಗೆ ಆಗಮಿಸಿದ ಈ ಪಯಣಿಗರು ಕಾರ್ಕಳದ ಜನರ ಅತಿಥಿ ಸತ್ಕಾರ ಮತ್ತು ಸಂಘಟನಾ ಚಾತುರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ವಿವಿಧ ದೇಶಗಳ ರೋಟೇರಿಯನ್ ಮತ್ತು ಕಾರ್ಕಳ ರೋಟರಿ ಕ್ಲಬ್ ನಡುವೆ ಪರಸ್ಪರ ಧ್ವಜ ವಿನಿಮಯ (Flag Exchange) ಮಾಡಿಕೊಳ್ಳಲಾಯಿತು. ಇದು ಜಾಗತಿಕ ಮಟ್ಟದಲ್ಲಿ ರೋಟರಿ ಸಂಸ್ಥೆಯ ಸ್ನೇಹ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಸಮಾರಂಭದಲ್ಲಿ ರೋಟರಿ ಪ್ರಮುಖರಾದ ಡಾ. ಭರತೇಶ ಆದಿರಾಜ್, ಹರಿಪ್ರಕಾಶ್ ಶೆಟ್ಟಿ, ಜಾನ್ ಆರ್. ಡಿ’ಸಿಲ್ವಾ, ರೇಖಾ ಉಪಾಧ್ಯಾಯ ಹಾಗೂ ಸುರೇಶ್ ನಾಯಕ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ವಿದೇಶಿ ಅತಿಥಿಗಳನ್ನು ಗೌರವಿಸಿದರು.



































