
ಬೈಲೂರು-ಕೌಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಂಗನಪಲ್ಕೆ-ಕರಿಕುಮೇರಿ ಪಾತಾವಿನ ಸಂಪರ್ಕ ಕಲ್ಪಿಸುವ ಡಾ| ಬಿ.ಆರ್. ಅಂಬೇಡ್ಕರ್ ರಸ್ತೆ ಕಳೆದ ಹಲವು ವರ್ಷಗಳಿಂದ ಸಂಚಾರಕ್ಕೆ ಅಯೋಗ್ಯವಾಗಿತ್ತು. ಈ ಭಾಗದ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟು, ಮಳೆಗಾಲದಲ್ಲಂತೂ ನಡೆದಾಡುವುದೇ ದುಸ್ತರವಾಗಿತ್ತು. ರಸ್ತೆ ದುರಸ್ತಿಗಾಗಿ 1 ವರ್ಷದ ಹಿಂದೆ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರೂ ಸ್ಥಳೀಯ ಪಂಚಾಯತ್ ಸದಸ್ಯರು ಅತ್ತ ತಿರುಗಿಯೂ ನೋಡಿರಲಿಲ್ಲ. ಗ್ರಾಮಸಭೆಯಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ “ಅನುದಾನವಿಲ್ಲ” ಎಂಬ ಹಾರಿಕೆ ಉತ್ತರದ ಮೂಲಕ ಪಂಚಾಯತ್ ಆಡಳಿತ ಜವಾಬ್ದಾರಿಯಿಂದ ನುಣುಚಿಕೊಂಡಿತ್ತು.
ಈ ಸಂದರ್ಭದಲ್ಲಿ ಗ್ರಾಮಸ್ಥರ ನೆರವಿಗೆ ಧಾವಿಸಿದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್, ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ನಿರ್ಮಾಣದ ಭರವಸೆ ನೀಡಿದ್ದರು. ಅದರಂತೆ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಗಮನಸೆಳೆದು ಶೀಘ್ರ ಕ್ರಮಕ್ಕೆ ಒತ್ತಾಯಿಸಿದ್ದರು. ಕಾರ್ಕಳದ ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ, ಅವರ ವಿಶೇಷ ಕಾಳಜಿಯಿಂದ ‘ಮುಖ್ಯಮಂತ್ರಿ ಗ್ರಾಮೀಣ ಅಭಿವೃದ್ಧಿ ಯೋಜನೆ’ಯಡಿ ಈ ರಸ್ತೆಗೆ ಅನುದಾನ ಮಂಜೂರಾಗಿದೆ.
ಪ್ರಸ್ತುತ ರಸ್ತೆಯ ಡಾಂಬರೀಕರಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಉಳಿದ 200 ಮೀಟರ್ ರಸ್ತೆಯನ್ನೂ ಶೀಘ್ರದಲ್ಲೇ ಅಭಿವೃದ್ಧಿಪಡಿಸುವ ಭರವಸೆ ನೀಡಲಾಗಿದೆ. ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಶ್ರಮಿಸಿದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಶುಭದ್ ರಾವ್, ಪಿಡಿಒ ಸಂಧ್ಯಾ ಶೆಟ್ಟಿ ಹಾಗೂ ಹೋರಾಟದಲ್ಲಿ ಕೈಜೋಡಿಸಿದ ಗ್ರಾಮಸ್ಥರಿಗೆ ಗ್ರಾಮೀಣ ಕಾಂಗ್ರೆಸ್ ಮುಖಂಡ ಅಂತೋನಿ ಮಿರಾಂದಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.



































