
ಕಾರ್ಕಳ (ಉಡುಪಿ ಜಿಲ್ಲೆ): ಧಾರ್ಮಿಕ ಶ್ರದ್ಧೆ ಮತ್ತು ಪ್ರವಾಸೋದ್ಯಮದ ಆಶಯದೊಂದಿಗೆ ಉಮ್ಮಿಕಲ್ ಬೆಟ್ಟದ ಮೇಲೆ ನಿರ್ಮಾಣವಾಗಿದ್ದ ಕಾರ್ಕಳದ ಮಹತ್ವಾಕಾಂಕ್ಷಿ ಪರಶುರಾಮ ಥೀಮ್ ಪಾರ್ಕ್ ಇಂದು ಕಳ್ಳ-ಕಾಕರ ಪಾಲಾಗುವ ದುಸ್ಥಿತಿಗೆ ತಲುಪಿದೆ. ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಈ ಪಾರ್ಕ್‌ನ ಬಾಗಿಲನ್ನು ರಾತ್ರೋರಾತ್ರಿ ಮುರಿದು ಒಳನುಗ್ಗಿದ ದುಷ್ಕರ್ಮಿಗಳು, ಕಟ್ಟಡದ ಮೇಲ್ಛಾವಣಿಗೆ ಅಳವಡಿಸಲಾಗಿದ್ದ ಬೆಲೆಬಾಳುವ ತಾಮ್ರದ ಹೊದಿಕೆಗಳನ್ನು (Copper Sheets) ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಶಾಸಕ ವಿ. ಸುನೀಲ್ ಕುಮಾರ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದು ಕಾರ್ಕಳದ ಇತಿಹಾಸದಲ್ಲೇ ಒಂದು “ಕಪ್ಪು ದಿನ” ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಹಿಂದೆ ಭಾರಿ ಪ್ರವಾಸಿಗರನ್ನು ಸೆಳೆಯಬೇಕೆಂಬ ಉದ್ದೇಶದಿಂದ ಆರಂಭವಾದ ಈ ಯೋಜನೆಯು, ಸದ್ಯ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಸಂಘರ್ಷದ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ.
ದ್ವೇಷದ ರಾಜಕಾರಣಕ್ಕೆ ಬಲಿಯಾದ ಯೋಜನೆ? ಶಾಸಕರ ಆರೋಪದ ಪ್ರಕಾರ, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಉದಯ್ ಕುಮಾರ್ ಶೆಟ್ಟಿ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಪ್ರೇರಿತ ಅಸೂಯೆಯಿಂದಾಗಿ ಈ ಯೋಜನೆಗೆ ಕಳೆದ 2 ವರ್ಷಗಳಿಂದ ಒಂದೂ ಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಈ ಹಠಮಾರಿ ಧೋರಣೆಯಿಂದಾಗಿ ಭವ್ಯವಾಗಿ ಕಂಗೊಳಿಸಬೇಕಿದ್ದ ಪ್ರವಾಸಿ ತಾಣವು ಅಕ್ಷರಶಃ ಪಾಳು ಬಿದ್ದು ಹೋಗಿದೆ. “ಘಜ್ನಿ ಮತ್ತು ಘೋರಿಗಳು ಹಿಂದೂ ಧಾರ್ಮಿಕ ಕೇಂದ್ರಗಳನ್ನು ಧ್ವಂಸ ಮಾಡಿದಂತೆ, ಇಲ್ಲಿನ ಕಾಂಗ್ರೆಸ್ ಪಟಾಲಂ ಥೀಮ್ ಪಾರ್ಕ್ ನಾಶವಾಗಲು ಕಾರಣವಾಗುತ್ತಿದೆ” ಎಂದು ಅವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲಾಡಳಿತದ ವೈಫಲ್ಯದತ್ತ ಬೆರಳು: 2023ರ ಸೆಪ್ಟೆಂಬರ್ ತಿಂಗಳಿನಿಂದ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಿದ್ದರೂ ಸಹ, ಕೆಲವರು ಕಾನೂನು ಬಾಹಿರವಾಗಿ ಪಾರ್ಕ್ ಒಳಗೆ ನುಗ್ಗಿ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದರು. ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮೌನ ವಹಿಸಿದ್ದೇ ಈ ಕಳ್ಳತನಕ್ಕೆ ದಾರಿ ಮಾಡಿಕೊಟ್ಟಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಕಳ್ಳತನ ನಡೆದ ಸ್ಥಳವನ್ನು ಪರಿಶೀಲಿಸಿದ ಶಾಸಕರು, ಈ ಹಿಂದೆ ಕಾನೂನು ಬಾಹಿರವಾಗಿ ವಿಡಿಯೋ ಮಾಡಿದವರನ್ನು ಮತ್ತು ತಾಮ್ರದ ಹೊದಿಕೆಗಳನ್ನು ಕದ್ದವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.



































