
ಕಾರ್ಕಳ: ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸುನಿಲ್ ಕುಮಾರ್ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಉಮ್ಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ನಿರ್ಮಿಸಲಾದ ಪರಶುರಾಮ ಪ್ರತಿಮೆ ಕುರಿತ ವಿವಾದಕ್ಕೆ ಇದೀಗ ತೆರೆ ಬಿದ್ದಿದೆ. ಈ ಪ್ರತಿಮೆಯು ಕಂಚಿನದ್ದಲ್ಲ, ಬದಲಾಗಿ ಫೈಬರ್‌ನದ್ದು ಎಂದು ಅಪಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಪೊಲೀಸರ ತನಿಖೆ ಮತ್ತು ನ್ಯಾಯಾಲಯಕ್ಕೆ ಸಲ್ಲಿಸಲಾದ ದೋಷಾರೋಪ ಪಟ್ಟಿಯಿಂದ ಭಾರಿ ಮುಖಭಂಗವಾಗಿದೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ 1231 ಪುಟಗಳ ದೋಷಾರೋಪ ಪಟ್ಟಿಯಲ್ಲಿ, ಪರಶುರಾಮ ಮೂರ್ತಿಯು ಹಿತ್ತಾಳೆಯ ಲೋಹದಿಂದ ನಿರ್ಮಿಸಲಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಶಿಲ್ಪಿ ಕೃಷ್ಣ ನಾಯ್ಕ ಅವರು ಕಂಚಿನ ಬದಲು ಹಿತ್ತಾಳೆಯಿಂದ ಮೂರ್ತಿಯನ್ನು ನಿರ್ಮಿಸಿರುವುದು ತಜ್ಞರ ಪರಿಶೀಲನಾ ವರದಿ ಮತ್ತು ತನಿಖೆಯಿಂದ ಸಾಬೀತಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ನಿರ್ಮಿತಿ ಕೇಂದ್ರ ಮತ್ತು ಶಿಲ್ಪಿಯ ನಡುವಿನ ಒಪ್ಪಂದದ ಪ್ರಕಾರ ಪ್ರತಿಮೆಯನ್ನು ಕಂಚಿನಿಂದ ನಿರ್ಮಿಸಬೇಕಾಗಿತ್ತು. ಆದರೆ, ಪ್ರತಿಮೆಯು ಹಿತ್ತಾಳೆಯದ್ದಾಗಿದ್ದು, ಕಾರ್ಕಳದಲ್ಲಿ ನಿರ್ಮಿಸಿರುವ ಪರಶುರಾಮ ಪ್ರತಿಮೆ ಫೈಬರ್‌ನದ್ದು ಎಂಬ ವಾದ ಸಂಪೂರ್ಣ ಸುಳ್ಳಾಗಿದೆ.
ಈ ಪ್ರಕರಣದಲ್ಲಿ ಶಿಲ್ಪಿ ಕೃಷ್ಣ ನಾಯ್ಕ, ಉಡುಪಿ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಡೈರೆಕ್ಟರ್ ಅರುಣ್ ಕುಮಾರ್ ಹಾಗೂ ಇಂಜಿನಿಯರ್ ಸಚಿನ್ ವೈ ಕುಮಾರ್ ಅವರು ಅಪರಾಧಿಕ ಒಳಸಂಚು, ನಂಬಿಕೆ ದ್ರೋಹ, ವಂಚನೆ ಎಸಗಿ, ಸಾಕ್ಷಿ ನಾಶ ಮಾಡಿರುವುದು ಸಾಬೀತಾಗಿದೆ. ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 420, 409, 201, 120 (ಬಿ) ಜೊತೆಗೆ 34ರ ಅಡಿಯಲ್ಲಿ ದೋಷಾರೋಪ ಪಟ್ಟಿಯನ್ನು ಕಾರ್ಕಳ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ದಿನಾಂಕ 21.06.2024 ರಂದು ಕೃಷ್ಣ ಶೆಟ್ಟಿ ಅವರು ನೀಡಿದ ದೂರಿನನ್ವಯ, ಕೃಷ್ಣ ನಾಯಕ್ (Krish Art World ಸಂಸ್ಥೆಯ ಮೂಲಕ) ಕಾರ್ಕಳ ತಾಲೂಕಿನ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಂಚಿನ ಪರಶುರಾಮ ಮೂರ್ತಿ ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ ಹಣ ಪಡೆದು, ನಂತರ ಕಂಚಿನ ಮೂರ್ತಿ ಮಾಡದೆ ನಕಲಿ ಪರಶುರಾಮ ಮೂರ್ತಿ ನಿರ್ಮಿಸಿ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ದೂರಿನ ಆಧಾರದ ಮೇಲೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 120/2024 ಕಲಂ 420, 409 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿತ್ತು.
ಒಟ್ಟಾರೆ, ಶಾಸಕ ಸುನೀಲ್ ಕುಮಾರ್ ಸೇರಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಡುತ್ತಿದ್ದ ಫೈಬರ್ ಪ್ರತಿಮೆ ಆರೋಪ ಸುಳ್ಳು ಎಂದು ಪೊಲೀಸ್ ತನಿಖೆಯಿಂದ ಸಾಬೀತಾಗಿದೆ.