
ಕಾರ್ಕಳ: ನಕ್ಸಲರು ಶರಣಾದ ಹಿನ್ನಲೆಯಲ್ಲಿ ರಾಜ್ಯ ಸರಕಾರ ನೀಡುತ್ತಿರುವ ಪರಿಹಾರ ಪ್ಯಾಕೇಜ್‌ಗೆ ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ.ಸುನೀಲ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಮ್ಮ ಫೇಸ್‌ಬುಕ್ ಮತ್ತು ಎಕ್ಸ್ ಖಾತೆಗಳಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಅವರು, “ಸರ್ಕಾರವು ಯಾವ ಆಧಾರದ ಮೇಲೆ ಈ ಪ್ಯಾಕೇಜ್ ನೀಡುತ್ತಿದೆ?” ಎಂದು ಪ್ರಶ್ನಿಸಿದರು
ಸರ್ಕಾರ ಆರು ನಕ್ಸಲರಿಗೆ ನೀಡಿರುವ ಶರಣಾಗತಿ ಪ್ಯಾಕೇಜ್ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ.ಈ ನಡೆಯ ಹಿಂದಿನ ಮೂಲವನ್ನು ಸರ್ಕಾರ ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು.ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ತಕ್ಷಣ ನಕ್ಸಲರು, ಭಯೋತ್ಪಾದಕರಿಗೆ ವಿಶೇಷ ಸೌಲಭ್ಯ ಸಿಗುತ್ತಿದ್ದು ಅವರಿಗೆ ಕ್ಷಮಾದಾನ, ಪ್ರಕರಣಗಳ ರದ್ದತಿ ಮತ್ತು ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ.ಆದರೆ, ಇದು ಪೊಲೀಸರು ಮತ್ತು ಸಾರ್ವಜನಿಕರ ವಿಶ್ವಾಸವನ್ನು ಕುಗ್ಗಿಸುವುದಿಲ್ಲವೇ? ಎಂದು ಶಾಸಕ ವಿ.ಸುನೀಲ್ ಕುಮಾರ್ ಪ್ರಶ್ನಿಸಿದರು.
‘ರಾಷ್ಟ್ರಕವಿ ಕುವೆಂಪು ಅವರ ಜನ್ಮಸ್ಥಳವಾದ ತಣ್ಣನೆಯ ಮಲೆನಾಡು ಪ್ರದೇಶ ನಕ್ಸಲರ ಪ್ರಭಾವಕ್ಕೆ ಒಳಗಾಗಿರುವ ಪ್ರದೇಶವಾಗಿದ್ದು, ಶರಣಾದ ನಕ್ಸಲರಿಗೆ ಸರ್ಕಾರ ಸೌಲಭ್ಯ ಕಲ್ಪಿಸಿ, ನಗರ ನಕ್ಸಲರಾಗಲು ಪ್ರೋತ್ಸಾಹಿಸುವುದೇ’ ಎಂದು ಶಾಸಕರು ತಮ್ಮ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದರು.
ಈ ಪ್ರಕ್ರಿಯೆಯನ್ನು ‘ಶರಣಾಗತಿ ಪ್ರಹಸನ’ ಎಂದ ಅವರು, ಈ ನಡೆ ಅನುಮಾನಾಸ್ಪದವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿ.ಸುನೀಲ್ ಕುಮಾರ್ ರವರ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.