
ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಣಜಾರು ಗ್ರಾಮದಲ್ಲಿ ನವೆಂಬರ್ 15 ರಂದು ರಾತ್ರಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗಂಭೀರ ಘಟನೆಯಲ್ಲಿ ಯುವಕನೋರ್ವನ ಮೇಲೆ ತಲವಾರಿನಿಂದ ಹಲ್ಲೆ ನಡೆಸಲಾಗಿದೆ. ಈ ಹಲ್ಲೆಯಿಂದ ಯುವಕ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಣಜಾರು ಗ್ರಾಮದ ಅಂಗಡಿ ಬೆಟ್ಟುಮನೆ ನಿವಾಸಿ ಶಿವರಾಜ್ ಶೆಟ್ಟಿ ಹಲ್ಲೆಗೊಳಗಾದ ಯುವಕ. ಶಿವರಾಜ್ ಶೆಟ್ಟಿ ಅವರ ಮಾವ ಬಾಲಕೃಷ್ಣ ಮತ್ತು ಅವರ ಪಕ್ಕದ ಮನೆಯವರಾದ ಮಂಜುನಂದ ಹೆಗ್ಡೆ ಕುಟುಂಬಗಳ ನಡುವೆ ಬಹಳ ಹಿಂದಿನಿಂದಲೂ ಜಾಗದ ಗೊಂದಲ ಮತ್ತು ತಕರಾರುಗಳು ಇತ್ತು. ಈ ದ್ವೇಷದ ಹಿನ್ನೆಲೆಯಲ್ಲಿ ಆಗಾಗ ಮಾತಿನ ಚಕಮಕಿಗಳು ನಡೆಯುತ್ತಿದ್ದವು ಎಂದು ತಿಳಿದುಬಂದಿದೆ.
ಘಟನೆ ನಡೆದ ದಿನ, ಅಂದರೆ ನವೆಂಬರ್ 15 ರ ರಾತ್ರಿ, ಶಿವರಾಜ್ ಶೆಟ್ಟಿ ಅವರು ತಮ್ಮ ಬೈಕ್‌ನಲ್ಲಿ ಬಾಲಕೃಷ್ಣ ಅವರ ಮನೆ ಬಳಿ ಬಂದಿದ್ದರು. ಈ ವೇಳೆ, ಜಾಗದ ವಿವಾದವನ್ನೇ ಮುಂದಿಟ್ಟುಕೊಂಡು ಮಂಜುನಂದ ಹೆಗ್ಡೆ ಅವರು ಏಕಾಏಕಿ ಶಿವರಾಜ್ ಅವರ ದಾರಿ ಅಡ್ಡಗಟ್ಟಿ, ಕೈಯಲ್ಲಿದ್ದ ತಲವಾರಿನಿಂದ ಅವರ ಮೇಲೆ ಹಲ್ಲೆ ಮಾಡಲು ಮುಂದಾದರು.
ಅಪಾಯವನ್ನು ಅರಿತ ಶಿವರಾಜ್ ಶೆಟ್ಟಿ ಅವರು ತಕ್ಷಣವೇ ತಪ್ಪಿಸಿಕೊಂಡು ಓಡಿ ಮಾವನ ಮನೆ ಸೇರಿಕೊಂಡರು. ಆದರೆ, ಈ ಸಂದರ್ಭದಲ್ಲಿ ಹಲ್ಲೆ ನಡೆಸಿದ ಮಂಜುನಂದ ಹೆಗ್ಡೆ ಅವರಿಗೆ ಜಯಾನಂದ ಹೆಗ್ಡೆ, ಚಂದ್ರಹಾಸ ಹೆಗ್ಡೆ ಸೇರಿದಂತೆ ಒಟ್ಟು ಏಳರಿಂದ ಎಂಟು ಮಂದಿಯ ಗುಂಪು ಸಾಥ್ ನೀಡಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಕ್ಷಣವೇ ಬಾಲಕೃಷ್ಣ ಮತ್ತು ಇತರರು ಗಾಯಗೊಂಡ ಶಿವರಾಜ್ ಶೆಟ್ಟಿ ಅವರನ್ನು ಚಿಕಿತ್ಸೆಗಾಗಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದರು. ಅದೃಷ್ಟವಶಾತ್ ಶಿವರಾಜ್ ಶೆಟ್ಟಿ ಅವರು ಹಲ್ಲೆಯ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿದ್ದರಿಂದ ದೊಡ್ಡ ಅಪಾಯದಿಂದ ಹಾಗೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಘಟನೆಯ ಕುರಿತು ಗಾಯಾಳು ಶಿವರಾಜ್ ಶೆಟ್ಟಿ ಅವರು ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ, ಮಂಜುನಂದ ಹೆಗ್ಡೆ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.













