
ಕಾರ್ಕಳ: ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ (ರಿ.) ಬೆಂಗಳೂರು ಇದರ ಕಾರ್ಕಳ ಮತ್ತು ಹೆಬ್ರಿ ತಾಲೂಕು ಶಾಖೆಗಳ ಅಧಿಕೃತ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಬುಧವಾರ ಕಾರ್ಕಳದ ಹೋಟೆಲ್ ಪ್ರಕಾಶ್ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.


ಪತ್ರಕರ್ತರಿಗೆ ಸಾಮಾಜಿಕ ತುಡಿತವಿರಲಿ: ಜಿ.ಎಂ. ರಾಜಶೇಖರ್
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಜಿ.ಎಂ. ರಾಜಶೇಖರ್, ಪತ್ರಕರ್ತರಿಗೆ ಕೇವಲ ವೃತ್ತಿಯಲ್ಲ, ಸಾಮಾಜಿಕ ಕಾಳಜಿ ಮತ್ತು ತುಡಿತ ಇರುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು. ಸರ್ಕಾರದ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವಿರುವಾಗ, ಸಮಾಜದ ಒತ್ತಡದ ನಡುವೆ ಕೆಲಸ ಮಾಡುವ ಗ್ರಾಮೀಣ ಪತ್ರಕರ್ತರಿಗೆ ಇಂತಹ ಸೌಲಭ್ಯಗಳನ್ನು ಸರ್ಕಾರ ಏಕೆ ನೀಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಸಂಘದ ವತಿಯಿಂದ ಆರೋಗ್ಯಕ್ಕಾಗಿ ಸಸಿ ನೆಡುವ ಮತ್ತು ಕಣ್ಣುದಾನದಂತಹ ಜನಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ ಅವರು, ಪತ್ರಕರ್ತರ ಬದುಕು ಅತ್ಯಂತ ನಿಷ್ಠುರವಾಗಿದ್ದು, ಅವರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದರು. ಕರಾವಳಿಯ ಜನರೇ ಮಾಧ್ಯಮಗಳ ನಿಜವಾದ ಅನ್ನದಾತರು, ಅವರ ನಂಬಿಕೆಯನ್ನು ಪತ್ರಕರ್ತರು ಉಳಿಸಿಕೊಳ್ಳಬೇಕು. ಅಲ್ಲದೆ, ಮಹಿಳಾ ಪತ್ರಕರ್ತೆಯರ ಮತ್ತು ಪತ್ರಕರ್ತರ ಮೇಲಿನ ದಬ್ಬಾಳಿಕೆ ತಡೆಯಲು ಬಲವಾದ ಕಾನೂನು ಭದ್ರತೆಯ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.
ಆತ್ಮಾವಲೋಕನ ಮತ್ತು ಒಗ್ಗಟ್ಟು ಅಗತ್ಯ: ಶಾಸಕ ವಿ. ಸುನಿಲ್ ಕುಮಾರ್
ಮುಖ್ಯ ಅತಿಥಿಯಾಗಿದ್ದ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಪತ್ರಿಕೋದ್ಯಮ ತಮಗೆ ಜೀವನದ ಹಲವು ಪಾಠಗಳನ್ನು ಕಲಿಸಿದೆ ಎಂದು ಸ್ಮರಿಸಿದರು. ಕಾರ್ಕಳದ ಪತ್ರಕರ್ತರು ತಮ್ಮ ನಡುವಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ಸಾಗಲು ಇದು ಸಕಾಲ ಎಂದರು. 1975ರ ತುರ್ತು ಪರಿಸ್ಥಿತಿಯ ಪತ್ರಿಕಾ ದಮನವನ್ನು ನೆನಪಿಸಿದ ಅವರು, ಇಂದು ಮುದ್ರಣ ಮಾಧ್ಯಮ ಕ್ಷೀಣಿಸುತ್ತಿರುವುದು ವಿಷಾದನೀಯ ಸಂಗತಿ ಎಂದರು. ಸುದ್ದಿಗಳು ಯಾರದ್ದೋ ಮುಖವಾಣಿಯಾಗದೆ, ತಾರತಮ್ಯವಿಲ್ಲದೆ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು. ಮುಂಬರುವ ಪವಿತ್ರ ಬಾಹುಬಲಿ ಮಸ್ತಕಾಭಿಷೇಕ ಮಹೋತ್ಸವವನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಕರೆ ನೀಡಿದರು.
ಬಸ್ ಪಾಸ್ ಬೇಡಿಕೆ ಈಡೇರಿಸುವ ಭರವಸೆ: ಉದಯ ಶೆಟ್ಟಿ ಮುನಿಯಾಲು
ಉದಯ ಕೃಷ್ಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ಮಾಧ್ಯಮಕ್ಕಿದೆ. ಕಾರ್ಕಳದ ಅಭಿವೃದ್ಧಿ ಪರ ಬೇಡಿಕೆಗಳನ್ನು ಸರ್ಕಾರದ ಮುಂದೆ ತರುವ ಕೆಲಸವಾಗಲಿ. ಪತ್ರಕರ್ತರ ಉಚಿತ ಬಸ್ ಪಾಸ್ ಬೇಡಿಕೆಯ ಕುರಿತು ತಾವು ವೈಯಕ್ತಿಕವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಮೌಲ್ಯಾಧಾರಿತ ಪತ್ರಿಕೋದ್ಯಮಕ್ಕೆ ಆದ್ಯತೆ
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಅಧ್ಯಕ್ಷೆ ಮಿತ್ರ ಪ್ರಭಾ ಹೆಗ್ಡೆ ಮಾತನಾಡಿ, ಡಿಜಿಟಲ್ ಯುಗದಲ್ಲಿ ಮಾಹಿತಿಗಳು ಸುಲಭವಾಗಿ ಸಿಗುತ್ತಿದ್ದರೂ, ಅವುಗಳ ಸತ್ಯಾಸತ್ಯತೆಯ ಬಗ್ಗೆ ಗೊಂದಲಗಳಿವೆ. ಈ ಮೌಲ್ಯಗಳನ್ನು ಕಾಪಾಡುವುದು ಪತ್ರಕರ್ತರ ಹೊಣೆ ಎಂದರು. ಫೆಡರೇಷನ್ ಆಫ್ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಮಾತನಾಡಿ, ಒಗ್ಗಟ್ಟಿನಿಂದ ಮಾತ್ರ ಪತ್ರಕರ್ತರ ಹಿತ ಕಾಪಾಡಲು ಸಾಧ್ಯ ಎಂದು ತಿಳಿಸಿದರು. ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಶುಭ ಹಾರೈಸಿದರು.


ಗೌರವಾರ್ಪಣೆ ಮತ್ತು ಪದಗ್ರಹಣ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಹಾಗೂ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷೆ ನಳಿನಿ ಎಸ್. ಸುವರ್ಣ ಅವರು ಸಂಘಟನೆಯ ಬೆಳವಣಿಗೆಗೆ ಎಲ್ಲರ ಸಹಕಾರ ಕೋರಿದರು. ರಾಜ್ಯ ಕಾರ್ಯದರ್ಶಿ ವಸಂತ್ ಕುಮಾರ್ ಅವರು ಸಂಘದ ಹಿನ್ನೆಲೆ ಮತ್ತು ಉದ್ದೇಶಗಳನ್ನು ಪ್ರಸ್ತಾವನೆಯಲ್ಲಿ ವಿವರಿಸಿದರು. ಇದೇ ವೇಳೆ ಪತ್ರಕರ್ತರಿಗೆ ಅಧಿಕೃತ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಸಂಘದ ರಾಜ್ಯಾಧ್ಯಕ್ಷರು, ರಾಜ್ಯ ಕಾರ್ಯದರ್ಶಿ ಹಾಗೂ ಸಂಘದ ರಾಜ್ಯಾಧ್ಯಕ್ಷರನ್ನು ಕಾರ್ಕಳ ಪತ್ರಕರ್ತ ಸಂಘದ ಪರವಾಗಿ ಸನ್ಮಾನಿಸಲಾಯಿತು. ಕಾರ್ಕಳದಲ್ಲಿ ಸಂಘ ರಚನೆಗೆ ಹೆಚ್ಚಿನ ಮುತುವರ್ಜಿಯನ್ನು ವಹಿಸಿಕೊಂಡು ಕೆಲಸ ಮಾಡಿದ ರಾಜ್ಯ ಕಾರ್ಯದರ್ಶಿ ವಸಂತ್ ಅವರನ್ನು ಎನ್. ಪಿ ನ್ಯೂಸ್ ನಾ ವ್ಯವಸ್ಥಾಪಕ ಸಂಪಾದಕರು, ಎನ್. ಪಿ ಗ್ರೂಪ್ಸ್ ನಾ ಛೇರ್ಮನ್ ಹಾಗೂ ಮ್ಯಾನೆಜಿಂಗ್ ಡೈರೆಕ್ಟರ್ ಆಗಿರುವ ಶ್ರೀಯುತ ವಾಸುದೇವ ಭಟ್ ನೆಕ್ಕರಪಲ್ಕೆ ಯವರು ಗುರುತಿಸಿ ಎಲ್ಲರ ಪರವಾಗಿ ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಕೃಷ್ಣಪ್ಪ, ಉಡುಪಿ ಜಿಲ್ಲಾಧ್ಯಕ್ಷ ಎಂ.ಎನ್. ಕೊಟ್ಟಾರಿ ಉಪಸ್ಥಿತರಿದ್ದರು. ಅಬೂಬುಕರ್ ಸ್ವಾಗತಿಸಿದರು, ಸೌಮ್ಯ ನಿರೂಪಣೆ ಮಾಡಿದರು ಮತ್ತು ಗೌರವಾಧ್ಯಕ್ಷ ಬಾಲಕೃಷ್ಣ ಭೀಮಗುಳಿ ವಂದಿಸಿದರು.













































