
ಕಾರ್ಕಳ: ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕಾದ ರಾಜ್ಯಪಾಲರ ಹುದ್ದೆಯು ರಾಜಕೀಯ ಪ್ರೇರಿತವಾಗಬಾರದು. ರಾಜ್ಯ ಸರ್ಕಾರವು ಸಂಪ್ರದಾಯದಂತೆ ಸಿದ್ಧಪಡಿಸಿದ ಭಾಷಣವನ್ನು ಓದದೆ ತಿರಸ್ಕರಿಸುವ ಮೂಲಕ ರಾಜ್ಯಪಾಲರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದನದಲ್ಲಿ ಸರ್ಕಾರದ ನೀತಿ-ನಿಲುವುಗಳನ್ನು ಮಂಡಿಸುವುದು ರಾಜ್ಯಪಾಲರ ಸಾಂವಿಧಾನಿಕ ಕರ್ತವ್ಯ. ಆದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪರವಾಗಿ ಏಜೆಂಟರಂತೆ ವರ್ತಿಸುತ್ತಿರುವ ರಾಜ್ಯಪಾಲರ ನಡೆ ಖಂಡನೀಯ. ಮುಖ್ಯವಾಗಿ ಉದ್ಯೋಗ ಖಾತರಿ ಯೋಜನೆಯನ್ನು ಮರುನಾಮಕರಣ ಮಾಡುವ ನೆಪದಲ್ಲಿ ಅದರ ಮೂಲ ಆಶಯವನ್ನೇ ಹತ್ತಿಕ್ಕಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರಕ್ಕಿದೆ. ಆದರೆ, ಈ ಸತ್ಯಗಳು ಜನರ ಮುಂದೆ ಬರಬಾರದು ಎಂಬ ಕಾರಣಕ್ಕೆ ರಾಜ್ಯಪಾಲರು ಅಸಂವಿಧಾನಿಕ ಹಾದಿ ತುಳಿದಿದ್ದಾರೆ ಎಂದು ಅವರು ಆರೋಪಿಸಿದರು.
ಸದನದ ಗದ್ದಲದ ನಡುವೆ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಮೇಲೆ ಬಿಜೆಪಿ ಸದಸ್ಯರು ನಡೆಸಿರುವ ದೈಹಿಕ ವರ್ತನೆಯು ಅತ್ಯಂತ ಆಘಾತಕಾರಿ. ಸದಸ್ಯರೊಬ್ಬರು ಸದನದಲ್ಲಿ ಪ್ರಶ್ನೆಗಳನ್ನು ಕೇಳುವುದು ಅಥವಾ ಪ್ರತಿಭಟಿಸುವುದು ಅವರ ಪ್ರಜಾಸತ್ತಾತ್ಮಕ ಹಕ್ಕಾಗಿದೆ. ಈ ವೇಳೆ ಹರಿಪ್ರಸಾದ್ ಅವರ ಬಟ್ಟೆ ಹರಿದುಹೋಗುವಂತೆ ವರ್ತಿಸಿದ ಬಿಜೆಪಿ ಸದಸ್ಯರ ನಡೆ ರಾಜ್ಯದ ಜನತೆಗೆ ಮಾಡಿದ ಅಪಮಾನ. ಬಿಜೆಪಿಯು ತನ್ನ ರಹಸ್ಯ ಅಜೆಂಡಾಗಳನ್ನು ಜಾರಿಗೊಳಿಸಲು ರಾಜ್ಯಪಾಲರ ಕಚೇರಿ ಹಾಗೂ ಗೂಂಡಾ ವರ್ತನೆಯನ್ನು ಬಳಸಿಕೊಳ್ಳುತ್ತಿದೆ. ಇಂತಹ ಬೆದರಿಕೆಗಳಿಗೆ ಕಾಂಗ್ರೆಸ್ ಮಣಿಯುವುದಿಲ್ಲ ಮತ್ತು ಸದನದ ಗೌರವ ಕಾಪಾಡಲು ಬದ್ಧವಾಗಿದೆ ಎಂದು ಶುಭದರಾವ್ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.



































