
ಕಾರ್ಕಳ: ಕಡು ಕತ್ತಲೆಯಲ್ಲಿ ದಾರಿ ತಪ್ಪಿ ಆಕಸ್ಮಿಕವಾಗಿ 30 ಅಡಿ ಆಳದ ಬಾವಿಗೆ ಬಿದ್ದು, ಅಲ್ಲಿಂದ ಮತ್ತಷ್ಟು ಆಳದ ಸುರಂಗದೊಳಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರೋಚಕ ಕಾರ್ಯಾಚರಣೆಯ ಮೂಲಕ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಮೂಡುಬಿದಿರೆ ತಾಲೂಕಿನ ಪುತ್ತಿಗೆ ಪದವು ಬಂಗ್ಲೆ ನಿವಾಸಿ ರಾಧಾಕೃಷ್ಣ (38) ಎಂಬುವವರು ಈ ಭೀಕರ ಅವಘಡದಿಂದ ಪಾರಾದವರು. ರಾತ್ರಿಯ ಸಮಯದಲ್ಲಿ ಸಂಚರಿಸುತ್ತಿದ್ದಾಗ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ, ರಕ್ಷಣೆ ಅಥವಾ ಆವರಣ ಗೋಡೆ ಇಲ್ಲದ ತೆರೆದ ಬಾವಿಯೊಂದು ಇವರ ಕಣ್ಣಿಗೆ ಬಿದ್ದಿಲ್ಲ. ಅನಿರೀಕ್ಷಿತವಾಗಿ ಬಾವಿಯೊಳಗೆ ಬಿದ್ದ ಇವರು, ಅದರ ತಳಭಾಗದಲ್ಲಿದ್ದ ಸುಮಾರು 20 ಅಡಿ ಉದ್ದದ ಕಿರಿದಾದ ಸುರಂಗದ ಗುಂಡಿಯೊಳಗೆ ಜಾರಿ ಬಿದ್ದಿದ್ದಾರೆ.
ಒಟ್ಟಾರೆ ಸುಮಾರು 50 ಅಡಿಗಳಿಗೂ ಹೆಚ್ಚು ಆಳದಲ್ಲಿ, ಕಡು ಕತ್ತಲೆಯ ನಡುವೆ ಅರೆಪ್ರಜ್ಞಾವಸ್ಥೆಯಲ್ಲಿದ್ದ ಇವರು ಹೊರಬರಲಾಗದೆ ಕಿರುಚಾಡುತ್ತಿದ್ದರು. ಸ್ಥಳೀಯ ಕಾರ್ಮಿಕರು ಇವರ ಚೀರಾಟವನ್ನು ಕೇಳಿ ತಕ್ಷಣವೇ ಎಚ್ಚೆತ್ತುಕೊಂಡು ಕಾರ್ಕಳ ಅಗ್ನಿಶಾಮಕ ದಳಕ್ಕೆ ತುರ್ತು ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಅವರ ತಂಡದ ಸಿಬ್ಬಂದಿಗಳಾದ ಜಯಮೂಲ್ಯ, ರೂಪೇಶ್, ನಿತ್ಯಾನಂದ, ಬಸವರಾಜ ಮತ್ತು ಗಣೇಶ್ ಅವರು ಜೀವದ ಹಂಗು ತೊರೆದು ಬಾವಿಗಿಳಿದು ಸುರಂಗದಲ್ಲಿದ್ದ ವ್ಯಕ್ತಿಯನ್ನು ಯಶಸ್ವಿಯಾಗಿ ಮೇಲೆತ್ತಿದ್ದಾರೆ. ಅಗ್ನಿಶಾಮಕ ದಳದ ಈ ಸಮಯೋಚಿತ ಸಾಹಸಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.



































