
ಕಾರ್ಕಳ : ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ದ್ವೇಷ ಪ್ರಚೋದಕ ಹಾಗೂ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಕಾರ್ಕಳದ ಕಸಬಾ ಗ್ರಾಮದ ವೆಂಕಟರಮಣ ದೇವಸ್ಥಾನದ ಬಳಿ ವಾಸವಾಗಿರುವ ಆರ್. ಉಲ್ಲಾಸ್ ಶೆಣೈ (45) ಎಂಬುವವರೇ ಕಾನೂನು ಕ್ರಮಕ್ಕೆ ಗುರಿಯಾದವರು. ಫೆಬ್ರವರಿ 23ರ ಬೆಳಗಿನ ಜಾವ ಸುಮಾರು 12:30ರ ಸುಮಾರಿಗೆ ಉಲ್ಲಾಸ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವಿವಾದಾತ್ಮಕ ಬರಹವೊಂದನ್ನು ಪ್ರಕಟಿಸಿದ್ದರು. ಈ ಪೋಸ್ಟ್‌ನಲ್ಲಿ ಕೆಲವು ನಿರ್ದಿಷ್ಟ ಸಂಘಟನೆಗಳು ಹಾಗೂ ಅವುಗಳ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಅತ್ಯಂತ ಅವಮಾನಕಾರಿ ಮತ್ತು ಕೆಟ್ಟ ಪದಬಳಕೆ ಮಾಡಲಾಗಿತ್ತು ಎನ್ನಲಾಗಿದೆ.
ಈ ಬರಹವು ಸಮಾಜದಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತಲು ಮತ್ತು ಶಾಂತಿ ಕದಡಲು ಪ್ರಚೋದನೆ ನೀಡುವಂತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ನಡೆದ ಒಂದು ಗಂಟೆಯ ಒಳಗಾಗಿಯೇ ಅಂದರೆ ಮುಂಜಾನೆ 1:30ಕ್ಕೆ ಪಿಎಸ್‌ಐ ಮುರುಳೀಧರ ನಾಯ್ಕ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಜಾಲತಾಣಗಳ ದುರುಪಯೋಗ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.



































