
ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಎಚ್. ಗೋಪಾಲ ಭಂಡಾರಿ ಅವರ ಪುತ್ರರಾದ ಸುದೀಪ್ ಭಂಡಾರಿ (48) ಅವರು ಅಕ್ಟೋಬರ್ 13ರ ರಾತ್ರಿ ಬ್ರಹ್ಮಾವರ ಸಮೀಪದ ಬಾರ್ಕೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ವರದಿಯಾಗಿದೆ. ಈ ಆಘಾತಕಾರಿ ಘಟನೆಯು ಸ್ಥಳೀಯ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.
ಬಾರ್ಕೂರು ಬಳಿಯ ರೈಲ್ವೆ ಹಳಿಗಳ ಮೇಲೆ ತಲೆ ಇಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಮೃತ ಸುದೀಪ್ ಭಂಡಾರಿ ಅವರು ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರಾಗಿದ್ದು, ಅವರ ಅಕಾಲಿಕ ಮರಣವು ಕುಟುಂಬಕ್ಕೆ ಅಘಾತ ತಂದಿದೆ. ಮೃತರು ತಾಯಿ ಪ್ರಕಾಶಿನಿ, ಸಹೋದರ ಪ್ರದೀಪ, ಸಹೋದರಿ ದೀಪಾ, ಪತ್ನಿ ಹಾಗೂ ಇಬ್ಬರು ಪುತ್ರರನ್ನೂ ಅಗಲಿದ್ದಾರೆ.
48 ವರ್ಷ ವಯಸ್ಸಿನ ಸುದೀಪ್ ಅವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲವಾದರೂ, ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.