
ಕಾರ್ಕಳ: ಕಾಂತಾವರ ಗ್ರಾಮದ ಇರ್ವತ್ತೂರು – ಚಿಲಿಂಬಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಸೆಪ್ಟೆಂಬರ್ 30ರಂದು ಬೆಳಿಗ್ಗೆ ನಸು ಕಂದು ಬಣ್ಣದ ದನದ ಮೃತದೇಹವೊಂದು ಪತ್ತೆಯಾಗಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳೀಯರನ್ನು ವಿಚಾರಿಸಿದರೂ ದನದ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇದರಿಂದಾಗಿ, ಯಾರೋ ಅಪರಿಚಿತ ವ್ಯಕ್ತಿಗಳು ದನವನ್ನು ಎಲ್ಲಿಂದಲೋ ಕಳವು ಮಾಡಿ, ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಾಟ ಮಾಡುವಾಗ ಉಸಿರುಗಟ್ಟಿ ಮೃತಪಟ್ಟಿದೆ. ನಂತರ, ಆರೋಪಿಗಳು ಮೃತದೇಹವನ್ನು ರಸ್ತೆ ಬದಿಗೆ ಎಸೆದು ಹೋಗಿರುವುದಾಗಿ ಶಂಕಿಸಲಾಗಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



































