
ಕಾರ್ಕಳ : ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಮಹಿಳಾ ಪ್ರಯಾಣಿಕರ ಪ್ರಯಾಣದ ಸಂಖ್ಯೆ 500 ಕೋಟಿ ತಲುಪಿದ್ದು ಈ ಐತಿಹಾಸಿಕ ಸಾಧನೆಯನ್ನು ಕಾರ್ಕಳ ಕಾಂಗ್ರೆಸ್ ವತಿಯಿಂದ ವಿಶಿಷ್ಟವಾಗಿ ಆಚರಿಸಲಾಯಿತು.
ಇಂದು ಕಾರ್ಕಳದ ಬಂಡಿಮಠ ಬಸ್ಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ಸಿಗೆ ಬಾಳೆಗಿಡ, ಹೂವಿನ ಹಾರ, ಬಣ್ಣದ ಬಲೂನ್ ಕಟ್ಟಿ ಸಿಂಗರಿಸಲಾಯಿತು. ಶಕ್ತಿ ಯೋಜನೆಯ ಫಲಾನುಭವಿಗಳಾದ ಮಹಿಳೆಯರು ಶೋಭಾನ ಹಾಡಿನ ಮೂಲಕ ಆರತಿ ಎತ್ತಿ ಪೂಜಿಸಿ, ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕ ನಿರ್ವಾಹಕರಾದ ಕೇಶವ.ಜಿ.ಹೆಚ್, ಶಿವಪುತ್ರ ಕುಂಬಾರ ಇವರಿಗೆ ಶಾಲು, ಫಲಪುಷ್ಟ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷರು, ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರು ಮಾತನಾಡಿ ಭೂಮಸೂದೆ ಕಾನೂನು, ಕೃಷಿ ನೀರಾವರಿಗೆ ಉಚಿತ ವಿದ್ಯುತ್ ಯೋಜನೆ, ಸಾಲಮೇಳ, ಸಿಇಟಿ ಪರೀಕ್ಷೆ ಮುಂತಾದ ಜನಪರ, ಬಡವರ ಪರವಾದ ಯೋಜನೆಗಳನ್ನು ಕೊಟ್ಟ ಕಾಂಗ್ರೆಸ್ ಈಗ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸುವ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷ ಎನ್ನುವುದನ್ನು ಸಾಭೀತು ಮಾಡಿದೆ ಎಂದು ಹೇಳಿದರು.

ಕಾರ್ಕಳ ಬ್ಲಾಕ್ ಅಧ್ಯಕ್ಷ ಶುಭದ ರಾವ್ ರವರು ಮಾತನಾಡಿ ಎರಡು ವರ್ಷಗಳಲ್ಲಿ ಶಕ್ತಿ ಯೋಜನೆಯ ಮೂಲಕ ರಾಜ್ಯಾದ್ಯಂತ ಮಹಿಳೆಯರು 500 ಕೋಟಿ ಪ್ರಯಾಣವನ್ನು ಮಾಡಿರುವುದು ಇದು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ಬಿಜೆಪಿಗೆ ರಾಜ್ಯದ ಮಹಿಳೆಯರು ನೀಡಿದ ಉತ್ತರವಾಗಿದೆ ಎಂದು ಹೇಳಿದರು.
ಹಿರಿಯ ವಕೀಲರಾದ ಶೇಖರ ಮಡಿವಾಳರವರು ಮಾತನಾಡಿ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಬಿಪಿನ್ ಚಂದ್ರ ಪಾಲ್ ಮಾತನಾಡಿ ರಾಜ್ಯದ ಆರ್ಥಿಕತೆಗೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಪರೋಕ್ಷವಾಗಿ ಸಹಕಾರಿಯಾಗಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಫಲವಾಗಿ ಇಂದು 500 ಕೋಟಿ ಪ್ರಯಾಣದ ದಾಖಲೆಯನ್ನು ನಿರ್ವಹಿಸಲು ಸಾಧ್ಯವಾಯಿತು ಎಂದು ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಭಾನು ಬಾಸ್ಕರ ಪೂಜಾರಿ ಸಂದರ್ಬೋಚಿತವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಿಸಾನ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಉದಯ ಶೆಟ್ಟಿ ಕುಕ್ಕುಂದೂರು, ಇಂಟಕ್ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ, ಶ್ರೀಮತಿ ಅನಿತಾ ಡಿಸೋಜ, ಯುವ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ, ಕೆ.ಎಮ್.ಎಫ್ ನಿರ್ದೇಶಕರಾದ ಸುಧಾಕರ ಶೆಟ್ಟಿ ಮುಡಾರು, ನಗರ ಕಾಂಗ್ರೆಸ್ ಅಧ್ಯಕ್ಷರುಗಳಾದ ರಾಜೇಂದ್ರ ದೇವಾಡಿಗ ಮತ್ತು ರೀನಾ ಡಿಸೋಜ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ , ವಿವಿಧ ಘಟಕಗಳ ಅಧ್ಯಕ್ಷರುಗಳು, ಗ್ರಾಮೀಣ ಸಮಿತಿಯ ಅಧ್ಯಕ್ಷರುಗಳು, ಚುನಾಯಿತ ಜನಪ್ರತಿನಿಧಿಗಳು, ಗ್ಯಾರಂಟಿ ಸಮಿತಿಯ ಸದಸ್ಯರುಗಳು, ಮಹಿಳಾ ಪದಾಧಿಕಾರಿಗಳು, ಯುವ ಕಾಂಗ್ರೆಸ್ ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಗ್ಯಾರಂಟಿ ಸಮಿತಿಯ ಸದಸ್ಯ ಪಿಲಿಪ್ ಮಸ್ಕರನೇನಸ್ ಸ್ವಾಗತಿಸಿ ಹೇಮಂತ ಆಚಾರ್ಯ ಧನ್ಯವಾದವಿತ್ತು ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ನಿರೂಪಿಸಿದರು.