
ಕಾರ್ಕಳ: ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಸಾಲ್ಮಾರದ ಜಾಮೀಯಾ ಮಸೀದಿಯ ಶಾದಿ ಮಹಲ್ ಸಭಾಂಗಣದಲ್ಲಿ ಇತ್ತೀಚೆಗೆ ‘ಸೌಹಾರ್ದ ಇಫ್ತಾರ್ ಕೂಟ’ವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಧರ್ಮಗಳ ಮುಖಂಡರು ಭಾಗವಹಿಸಿ ಶಾಂತಿ ಮತ್ತು ಸಹಬಾಳ್ವೆಯ ಸಂದೇಶ ಸಾರಿದರು.
ಕಾರ್ಯಕ್ರಮದಲ್ಲಿ ಬಂಗ್ಲೆಗುಡ್ಡೆ ತೈಬಾ ಗಾರ್ಡನ್ ಪ್ರಾಂಶುಪಾಲ ಮೌಲಾನ ಅಹ್ಮದ್ ಶರೀಪ್ ಮಾತನಾಡಿ, “ಧರ್ಮದ ಪಾಲನೆ ಮನಃಶಾಂತಿಗೆ ದಾರಿ. ನಾವೆಲ್ಲರೂ ಸೌಹಾರ್ದತೆಗೆ ಮಹತ್ವ ನೀಡೋಣ” ಎಂದರು. ನಕ್ರೆ ಚರ್ಚ್ ಧರ್ಮಗುರು ವಂದನೀಯ ಪಾದರ್ ಲೂಯಿಸ್ ಡೇಸಾ ಮಾತನಾಡಿ, “ದೇವರ ಮಕ್ಕಳಾದ ನಮ್ಮನ್ನು ಜಾತಿ-ಧರ್ಮಗಳು ಒಡೆಯಬಾರದು” ಎಂದು ಕರೆ ನೀಡಿದರು. ಹಿರಿಯ ನ್ಯಾಯವಾದಿ ಶೇಖರ ಮಡಿವಾಳ ಜಾಗತಿಕ ಶಾಂತಿಗಾಗಿ ಹಾರೈಸಿದರು.
ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಶಿಶುನಾಳ ಶರೀಫರ ಜಯಂತಿಯಂದೇ ಈ ಸೌಹಾರ್ದ ಕೂಟ ನಡೆಯುತ್ತಿರುವುದು ವಿಶೇಷ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗೌರವಾರ್ಪಣೆ ಮತ್ತು ನೆರವು: ಇದೇ ಸಂದರ್ಭದಲ್ಲಿ ರಾಜ್ಯ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖ್ ವಾಹಿದ್ ದಾವೂದ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ಅನಾರೋಗ್ಯದಿಂದ ಬಳಲುತ್ತಿರುವ ಶುಭಾನ್ ಮತ್ತು ಅಕ್ಬರ್ ಅವರ ವೈದ್ಯಕೀಯ ಚಿಕಿತ್ಸೆಗೆ ಘಟಕದ ವತಿಯಿಂದ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಶರ್ಫುದ್ದೀನ್ ಶೇಖ್, ಮೊಹ್ಮದ್ ಗೌಸ್, ಆಶ್ಫಕ್ ಅಹ್ಮದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಎಂ.ಪಿ. ಮೊಯಿದಿನಬ್ಬ ಇನ್ನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೇಖ್ ಶಭೀರ್ ಮಿಯ್ಯಾರು ನಿರೂಪಿಸಿ, ಅಬ್ದುಲ್ ಸಾಣೂರು ವಂದಿಸಿದರು.




































