
ಏಕಾಗ್ರತೆಯಿಂದ ಮನಸ್ಸಿನ ಶಕ್ತಿ ವೃದ್ಧಿ ಆಗುತ್ತದೆ. ಅದು ವಿದ್ಯಾರ್ಥಿಗಳಲ್ಲಿ ಅಧ್ಯಯನ ಸಾಮರ್ಥ್ಯವನ್ನು ಜಾಸ್ತಿ ಮಾಡುತ್ತದೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಮುನ್ನುಡಿಯನ್ನು ಬರೆಯಬಲ್ಲದು. ಏಕಾಗ್ರತೆಯಿಂದ ಮಾಡಿದ ಯಾವುದೇ ಕೆಲಸವು ಅತ್ಯುತ್ತಮ ಫಲಿತಾಂಶವನ್ನು ಕೊಡುತ್ತದೆ ಎಂದು ಕಾರ್ಕಳದ ಆಧ್ಯಾತ್ಮಿಕ ಸಾಧಕಿ, ರಾಜಯೋಗ ಶಿಕ್ಷಣದ ಶಿಕ್ಷಕಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ಅವರು ನುಡಿದರು. ಅವರು ಕಾರ್ಕಳದ ಕಾಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಹತ್ತಾರು ಚಟುವಟಿಕೆಗಳ ಮೂಲಕ ಏಕಾಗ್ರತೆ ಮತ್ತು ಮೆಮೊರಿ ಶಕ್ತಿಯನ್ನು ಉದ್ದೀಪನಗೊಳಿಸಲು ಸಾಧ್ಯ ಎಂದು ವಿವರಿಸಿದರು.

ಪುರಸಭೆಯ ಮಾಜಿ ಸದಸ್ಯೆ ಆದ ಮಾಲಿನಿ ಪೈ ಅವರು ಈ ವಿಕಸನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಶಾಲೆಯ ಮುಖ್ಯಶಿಕ್ಷಕಿ ಇಂದಿರಾ ಅವರು ಸ್ವಾಗತಿಸಿದರು. ಶಿಕ್ಷಕಿ ಸುಮಾಮಣಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿ ಧನ್ಯವಾದ ನೀಡಿದರು. ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪೂರ್ಣ ಪ್ರಯೋಜನ ಪಡೆದುಕೊಂಡರು.
