
ಕಾರ್ಕಳ:ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪ್ರಕರಣದ ಆರೋಪಿ ದಿಲೀಪ್ ಹೆಗ್ಡೆ (28) ಜಾಮೀನು ಕೋರಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಸಂಚಾರಿ ಪೀಠ ಕಾರ್ಕಳದಲ್ಲಿ ಅರ್ಜಿ ಸಲ್ಲಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
2024ರ ಅಕ್ಟೋಬರ್ 20ರಂದು ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆ ಎಂಬಲ್ಲಿ ಬಾಲಕೃಷ್ಣ ಪೂಜಾರಿ (44) ಎಂಬವರನ್ನು ಅವರ ಪತ್ನಿ ಪ್ರತಿಮಾ (36) ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಸೇರಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಅಕ್ಟೋಬರ್.25ರಂದು ಪ್ರತಿಮಾ ಮತ್ತು ದಿಲೀಪ್ ಹೆಗ್ಡೆ ಅವರನ್ನು ಬಂಧಿಸಿದ್ದರು
ಈ ಸಂಬಂಧ ದಿಲೀಪ್ ಹೆಗ್ಡೆ, ನ್ಯಾಯಾಂಗ ಬಂಧನದಲ್ಲಿದ್ದು, ಎರಡು ದಿನಗಳ ಹಿಂದೆ ಜಾಮೀನು ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಗೆ ಸರಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಲು ದಿನಾಂಕ ಫೆಬ್ರವರಿ 4ಕ್ಕೆ ನಿಗದಿಪಡಿಸಿದ್ದು, ಈ ದಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಸರಕಾರಿ ಅಭಿಯೋಜಕ ಪ್ರಕಾಶ್ ಚಂದ್ರ ಶೆಟ್ಟಿ ಆಕ್ಷೇಪಣೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.